ಋತುಚಕ್ರದ ನೋವು ಕೆಲವರಿಗೆ ಸಾಮಾನ್ಯವಾದರೆ, ಮತ್ತೆ ಕೆಲವರಿಗೆ ಅಸಾಮಾನ್ಯ. ಈ ಸಮಯದಲ್ಲಿ ಉಂಟಾಗುವ ತೀವ್ರತರದ ನೋವಿಗೆ ಕೆಲವೊಮ್ಮೆ ನೋವು ನಿವಾರಕಗಳನ್ನು ಸೇವಿಸಿ, ಉಪಶಮನ ಮಾಡಿಕೊಳ್ಳುವುದುಂಟು. ಆದರೆ ತಜ್ಞರು ಹೇಳುವ ಪ್ರಕಾರ, ಈ ನೋವಿಗೆ ಇತರೆ ಸಮಸ್ಯೆಗಳೂ ಕೂಡ ಕಾರಣವಾಗುತ್ತವೆ. ಇದಕ್ಕೆ ಸೂಕ್ತ ಚಿಕಿತ್ಸೆ ಬೇಕೇಬೇಕು. ಮಾತ್ರೆಗಳ ಹೊರತಾದ ಕೆಲವು ಪರ್ಯಾಯ ಚಿಕಿತ್ಸೆಗಳು ಅಗತ್ಯ. ಇವುಗಳ ಪೈಕಿ ಒಂದು ಜಲ ಚಿಕಿತ್ಸೆ. ಇದು ಋತುಚಕ್ರದ ಸಮಯದ ನೋವನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೇ ವಾಸಿ ಮಾಡಬಲ್ಲದು.
ಯಾಕೆ ಈ ನೋವು?: ಋತುಚಕ್ರದ ಅವಧಿಯಲ್ಲಿ ಎಲ್ಲರಿಗೂ ನೋವು ಕಂಡುಬರುವುದಿಲ್ಲ. ಆದರೆ, ಕೆಲವರು ಯಾತನಾಮಯ ನೋವು ಅನುಭವಿಸುತ್ತಾರೆ. ಋತುಚಕ್ರದ ಸಮಯದಲ್ಲಿ ಕೆಲವು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಗರ್ಭಾಶಯದ ಸ್ನಾಯುಗಳು ಹೆಚ್ಚಿನ ಒತ್ತಡ ಹಾಕುವ ಹಿನ್ನೆಲೆಯಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಋತುಚಕ್ರದ ಸಂದರ್ಭದಲ್ಲಿ ರಕ್ತ ಗರ್ಭಾಶಯದಲ್ಲಿ ನಿಧಾನವಾಗಿ ಹರಿದು, ಕೆಳ ಹೊಟ್ಟೆಯಲ್ಲಿ ನೋವು ಹೆಚ್ಚಿಸುತ್ತದೆ. ಇದರಿಂದ ಪರಿಹಾರ ಕಾಣಬೇಕು ಎಂದರೆ ಸೊಂಟದ ಪ್ರದೇಶದ ಸ್ನಾಯುಗಳನ್ನು ಬಲಗೊಳಿಸುವ ವ್ಯಾಯಾಮಕ್ಕೆ ಹೆಚ್ಚು ಗಮನ ಹರಿಸಬೇಕು.
ಜಲ ಚಿಕಿತ್ಸೆ ಈ ರೀತಿಯ ಒಂದು ವ್ಯಾಯಾಮ. ಇದರ ಭಾಗವಾಗಿ ಯೋಗ, ಏರೋಬಿಕ್ಸ್, ಪೈಲಟ್ಸ್ ಮುಂತಾದವುಗಳನ್ನು ನಡೆಸಬಹುದು. ಜಲ ಚಿಕಿತ್ಸೆಯ ಅಂಗವಾಗಿ ಒಂದು ಸಣ್ಣ ಕೊಳದಲ್ಲಿ ಬಿಸಿನೀರು ತುಂಬಿಸಿ, ಅದರಲ್ಲಿ ದೇಹವನ್ನು ಆರಾಮಗಿರಲಿ ಬಿಡಿ. ಈ ವ್ಯಾಯಾಮದಿಂದ ದೇಹದಲ್ಲಿನ ನೈಸರ್ಗಿಕ ನೋವು ನಿವಾರಕ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಅಷ್ಟೇ ಅಲ್ಲ, ರಕ್ತದ ಸಂಚಾರ ಉತ್ತಮವಾಗುತ್ತದೆ. ಇದರ ಫಲಿತಾಂಶವೇ ಋತುಚಕ್ರದ ನೋವಿನಿಂದ ಮುಕ್ತಿ!.
ಅನೇಕ ಲಾಭಗಳು: ಬಿಸಿನೀರಿನ ಜಲ ವ್ಯಾಯಾಮ ದೇಹಕ್ಕೆ ದೈಹಿಕ ಮತ್ತು ಮಾನಸಿಕವಾಗಿ ಅನೇಕ ಲಾಭ ತರುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಬಿಸಿನೀರಿನಲ್ಲಿನ ದೇಹವನ್ನಿಡುವುದರಿಂದ ರಕ್ತದ ಪರಿಚಲನೆ ಅಭಿವೃದ್ಧಿಯಾಗುತ್ತದೆ. ಈ ಮುಖೇನ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಹೆಚ್ಚಾಗಿ ಗರ್ಭಾಶಯದ ಸ್ನಾಯುಗಳ ಮೇಲಿನ ಒತ್ತಡ ತಗ್ಗಿ ನೋವು ನಿವಾರಣೆಯಾಗುತ್ತದೆ.
ಬಿಸಿನೀರ ಕೊಳದಲ್ಲಿ ವ್ಯಾಯಾಮ ಮಾಡುವಾಗ ಕಾಲು ಮತ್ತು ಕೈಗಳನ್ನು ನೀರಿನಿಂದ ಅಲುಗಾಡಿಸುವುದು ಉತ್ತಮ. ಈ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಭಾಗದ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ನಿಧಾನವಾಗಿ ಕಡಿಮೆಯಾಗುತ್ತದೆ.ನೀರಿನ ಜೊತೆಗಿನ ಘರ್ಷಣೆಗೆ ವಿರುದ್ಧವಾಗಿ ವ್ಯಾಯಾಮ ಮಾಡುವುದರಿಂದ ಕೆಲವು ಸ್ನಾಯುಗಳು ಬಲಗೊಳ್ಳುತ್ತವೆ.
ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಕೆಲವೊಮ್ಮೆ ಋತುಚಕ್ರದಲ್ಲಿ ನೋವು ಅನುಭವಿಸುತ್ತೇವೆ. ಮನಸ್ಥಿತಿ ಬದಲಾವಣೆ, ಒತ್ತಡ, ಚಿಂತೆ, ಆತಂಕ ಹಾಗು ಕಿರಿಕಿರಿ ಮುಂತಾದವುಗಳು ಈ ಸಮಯದಲ್ಲಿ ಸಾಮಾನ್ಯ. ಇದರಿಂದ ಕೂಡ ಬಿಸಿನೀರಿನ ವ್ಯಾಯಾಮ ಆರಾಮ ನೀಡುತ್ತದೆ.
ಹೊಸಬರಾದ್ರೆ, ತಜ್ಞರ ಸಮ್ಮುಖದಲ್ಲಿ ವ್ಯಾಯಾಮ ಮಾಡಿ: ತಜ್ಞರು ಹೇಳುವಂತೆ, ಈ ವ್ಯಾಯಾಮದ ಅಭ್ಯಾಸಗಳನ್ನು ವಾರದಲ್ಲಿ ಮೂರು ದಿನ ಒಂದು ಗಂಟೆ ಮಾಡುವುದರಿಂದ ಮಾಸಿಕ ನೋವಿನಿಂದ ಪರಿಹಾರ ಕಾಣಬಹುದು. ಆದರೆ, ಈ ವ್ಯಾಯಾಮಕ್ಕೆ ನೀವು ಹೊಸಬರಾಗಿದ್ದರೆ, ತಜ್ಞರ ಸಮ್ಮುಖದಲ್ಲಿ ಮಾರ್ಗದರ್ಶನದಲ್ಲಿ ಮಾಡುವುದು ಒಳಿತು. ಇದನ್ನು ಮನೆಯಲ್ಲಿಯೇ ಸಣ್ಣ ಕೊಳ ನಿರ್ಮಿಸಿ ಮಾಡಬಹುದು/ ಗಾಳಿ ತುಂಬಿದ/ ರಬ್ಬರ್ ತುಂಬಿದ ಕೊಳಗಳು ಲಭ್ಯವಿದ್ದು, ಅದರಲ್ಲಿಯೂ ಕೂಡ ಮಾಡಬಹುದು ಎನ್ನುತ್ತಾರೆ.
ಇದನ್ನೂ ಓದಿ: ಋತುಚಕ್ರದ ಅವಧಿಯ ಮೇಲೆ ಕೋವಿಡ್ 19ರ ಪರಿಣಾಮಗಳೇನು?