ದೇಶದಲ್ಲಿ ಸೂರ್ಯನ ಪ್ರತಾಪ ತಣ್ಣಗಾಗಿಲ್ಲ. ಜೂನ್ ಆರಂಭವಾಗಿ ವಾರ ಕಳೆದರೂ ತಂಪನಿಸುವ ವಾತಾವರಣವಿಲ್ಲ. ಸುಡು ಬಿಸಿಲಿನ ವಾತಾವರಣದಲ್ಲೇ ದುಡಿಮೆಯಲ್ಲಿ ತೊಡಗಿರುವವರು ವಾರಾಂತ್ಯಕ್ಕೆ ಹೌಸ್ ಪಾರ್ಟಿಗಳಲ್ಲಿ ಬಿಯರ್‌ನೊಂದಿಗೆ ಎಂಜಾಯ್ ಮಾಡುತ್ತಾರೆ. ಬಿಯರ್ ನಿಯಮಿತ ಸೇವನೆಯು ಕೆಲ ಅನಾರೋಗ್ಯ ಸಮಸ್ಯೆ ನಿವಾರಣೆಗೆ ಮದ್ದಿನ ರೀತಿ ಕೆಲಸ ಮಾಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ಮರೆಯದಿರಿ. ಬಿಯರ್ ಪ್ರಿಯರೇ, ನಿಮ್ಮ ನೆಚ್ಚಿನ ಪಾನೀಯವನ್ನು ಆನಂದಿಸುವಾಗ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಬಿಯರ್ ಸೇವನೆ ವೇಳೆ ಏನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಎಂದು ದಿವಾನ್ಸ್ ಮಾಡರ್ನ್ ಬ್ರೆವರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರೇಮ್ ದಿವಾನ್ ಹೇಳಿದ್ದಾರೆ. ಅದೇನು ಅಂತ ತಿಳಿಯೋಣ ಬನ್ನಿ..
ಬಾಯಾರಿಕೆ ನೀಗಿಸುವ ಪಾನೀಯವೆಂದು ಪರಿಗಣಿಸಬೇಡಿ: ಅಪರೂಪಕ್ಕೆ ಬಿಯರ್ ಸೇವನೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಅದನ್ನು ಬಾಯಾರಿಕೆ ನೀಗಿಸುವ ಪಾನೀಯವೆಂದು ಪರಿಗಣಿಸಬೇಡಿ. ಬಿಯರ್ ಶೇ.4.5 ರಿಂದ 8ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಬಿಯರ್‌ನ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹಾಗಾಗಿ ಬಿಯರ್ ಸೇವನೆಯ ನಂತರ ಸಾಕಷ್ಟು ನೀರು ಕುಡಿಯುವಂತೆ ಯಾವಾಗಲೂ ಸಲಹೆ ನೀಡಲಾಗುತ್ತದೆ.
ಬಿಯರ್ ಸೇವನೆ ನಂತರ ವಾಹನ ಚಲಾಯಿಸುವುದನ್ನು ತಪ್ಪಿಸಿ: ಮೇಲೆ ತಿಳಿಸಿದಂತೆ ಬಿಯರ್‌ನಲ್ಲಿರುವ ಆಲ್ಕೋಹಾಲ್ ದೇಹದಿಂದ ಅತ್ಯಂತ ವೇಗವಾಗಿ ಹೀರಲ್ಪಡುತ್ತದೆ. ಹಾಗಾಗಿ ಬೇಸಿಗೆ, ಮಳೆಗಾಲ ಅಥವಾ ಚಳಿಗಾಲ ಯಾವುದೇ ಇರಲಿ ಬಿಯರ್ ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಿ. ಈ ಮೂಲಕ ಅಪಘಾತಗಳಾಗುವುದನ್ನು ತಡೆಯಿರಿ. ಬಿಯರ್ ಅನ್ನು ಕಡಿಮೆ ಆಲ್ಕೋಹಾಲ್ ಅಂಶವಿರುವ ಉತ್ಪನ್ನವೆಂದು ಪರಿಗಣಿಸಲಾಗಿದ್ದರೂ ಕೂಡ, ಸ್ಟ್ರಾಂಗ್ ಬಿಯರ್ಗಳ ಹೆಚ್ಚು ಸೇವನೆ ಸಮಸ್ಯೆಗೆ ಕಾರಣವಾಗಬಹುದು. ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೇ ದೇಶದಲ್ಲಿ ಸಂಚಾರ ನಿಯಮಗಳು ಕಟ್ಟುನಿಟ್ಟಾಗಿದ್ದು, ದಂಡ ಕಟ್ಟುವ ಪರಿಸ್ಥಿತಿ ಎದುರಾಗಬಹುದು.
ಬಾರ್ಬಿಕ್ಯೂ ಜೊತೆಗೆ ಮಿಶ್ರಣ ಮಾಡುವುದನ್ನು ತಪ್ಪಿಸಿ: ಬಾರ್ಬಿಕ್ಯೂ ಸೇರಿದಂತೆ ಕೆಲ ಮಾಂಸಹಾರ ಹೆಚ್ಚಿನ ಪ್ಯೂರಿನ್ ಅಂಶವನ್ನು ಹೊಂದಿರುತ್ತವೆ. ಬಿಯರ್ ಕೂಡ ಹೆಚ್ಚಿನ ಪ್ಯೂರಿನ್ ಅಂಶವನ್ನು ಹೊಂದಿದೆ. ಹಾಗಾಗಿ ಬಿಯರ್‌ನೊಂದಿಗೆ ಬಾರ್ಬಿಕ್ಯೂ ಅನ್ನು ತೆಗೆದುಕೊಂಡರೆ ಪ್ಯೂರಿನ್ ಅಂಶ ಹೆಚ್ಚಾಗುತ್ತದೆ. ಪರಿಣಾಮ ಅನಾರೋಗ್ಯ, ಮೈ-ಕೈ ನೋವು, ಸಂಧಿವಾತ ನೋವಿಗೆ ಕಾರಣವಾಗುತ್ತದೆ. ಈಗಾಗಲೇ ಸಂಧಿವಾತ ಸಮಸ್ಯೆ ಇರುವವರಂತೂ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಹಾಗಾಗಿ ಬಿಯರ್‌ನೊಂದಿಗೆ ಅತಿ ಹೆಚ್ಚು ಮಸಾಲೆಯಿರುವ ಮಾಂಸಹಾರ ಬಿಟ್ಟು ಸರಳ ಆಹಾರ ಸೇವಿಸಿದರೆ ಉತ್ತಮ.
ಕೋಲ್ಡ್ ಬಿಯರ್ನಿಂದ ದೂರವಿರಿ: ಸಾಮಾನ್ಯ ತಣ್ಣಗಿರುವ ಅಥವಾ ಕೋಲ್ಡ್ ಆಗಿರುವ ಬಿಯರ್ ಮತ್ತು ಐಸ್-ಕೋಲ್ಡ್ ಬಿಯರ್ ನಡುವೆ ವ್ಯತ್ಯಾಸವಿದೆ. ಸಾಮಾನ್ಯ ತಣ್ಣಗಿರುವ ಬಿಯರ್‌ನ ನಿಯಮಿತ ಸೇವನೆ ದೇಹವನ್ನು ರಿಫ್ರೆಶ್ ಮಾಡುತ್ತದೆ. ಆದರೆ ಐಸ್-ಕೋಲ್ಡ್ ಬಿಯರ್ ಜಠರ/ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ದೇಹದ ಉಷ್ಣತೆಯು ವೇಗವಾಗಿ ಕಡಿಮೆಯಾಗುವುದರಿಂದ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರಿ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ರಕ್ತದ ಹರಿವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಐಸ್ ಮಿಕ್ಸ್ ಮಾಡುವುದನ್ನು ತಡೆಯಿರಿ. ಕೊಂಚ ಬೆಚ್ಚಗಿನ ವಾತಾವರಣದಲ್ಲಿ ಬಿಯರ್ ಸೇವಿಸಿ.
ಡಯೆಟ್ನಲ್ಲಿದ್ದರೆ, ಗರ್ಭಿಣಿಯಾಗಿದ್ದರೆ ಬಿಯರ್ ಬೇಡ: ಬಿಯರ್ ಸಾಕಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಒಂದು ವೇಳೆ ನೀವು ಡಯೆಟ್ನಲ್ಲಿದ್ದರೆ, ಪ್ರತಿ ಕ್ಯಾಲೋರಿಗಳನ್ನು ಎಣಿಸುವವರಾದರೆ ಬಿಯರ್ ಬೇಡ. ಅಂತೆಯೇ ಗರ್ಭಿಣಿಯರಿಗೆ ಬಿಯರ್ ಸೂಕ್ತವಲ್ಲ. ಆಲ್ಕೋಹಾಲ್ ರಕ್ತದಲ್ಲಿ ಮಿಶ್ರಣಗೊಳ್ಳುತ್ತದೆ. ಇದು ಭ್ರೂಣಕ್ಕೆ ಸಹ ಪೂರೈಕೆಯಾಗುತ್ತದೆ ಮತ್ತು ಮಗುವಿನ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಬಿಯರ್ನಿಂದ ದೂರವಿರುವುದು ಉತ್ತಮ.