ಚಳಿಗಾಲದಲ್ಲಿ ಕೂದಲಿನ ರಕ್ಷಣೆ ಸವಾಲಿನ ಕೆಲಸವೇ ಸರಿ. ಶುಷ್ಕ ವಾತಾವರಣ, ತುರಿಕೆಯು ತಲೆಹೊಟ್ಟಿಗೆ ಕಾರಣವಾಗುತ್ತದೆ. ಅಲ್ಲದೇ, ಮಲಸ್ಸೆಜಿಯಾ ಶಿಲೀಂಧ್ರದ ಹೆಚ್ಚಿನ ಹರಡುವಿಕೆಯೂ ಕೂದಲಿನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ತಲೆಹೊಟ್ಟು ಕಡಿಮೆ ಮಾಡಿ ಕೂದಲನ್ನು ರಕ್ಷಣೆ ಮಾಡಬೇಕಾದಲ್ಲಿ ನೀವು ಸೂಕ್ತ ಉತ್ಪನ್ನಗಳನ್ನು(ಶಾಂಪೂ) ಬಳಸಬೇಕಾಗುತ್ತದೆ.
ಇದಲ್ಲದೇ, ತಲೆಹೊಟ್ಟು ಸಮಸ್ಯೆಯ ಜೊತೆಗೆ ಅವಮಾನಕ್ಕೂ ಕಾರಣವಾಗುತ್ತದೆ. ಅತಿಯಾದ ಒತ್ತಡ, ಹವಾಮಾನದಲ್ಲಿನ ಬದಲಾವಣೆ (ತೀವ್ರವಾದ ಶಾಖ ಅಥವಾ ಶೀತ), ಕೊಬ್ಬಿನಂಶವುಳ್ಳ ಆಹಾರಗಳ ಅತಿಯಾದ ಸೇವನೆ, ಶಾಂಪೂ ಬದಲಾವಣೆ, ಅತಿಯಾದ ಬೆವರು ಮತ್ತು ಮಾಲಿನ್ಯದಿಂದಲೂ ತಲೆಹೊಟ್ಟು ಉಂಟಾಗುತ್ತದೆ. ಮಲಸ್ಸೆಜಿಯಾ ಶಿಲೀಂಧ್ರವೂ ತಲೆಹೊಟ್ಟು ಸೃಷ್ಟಿಸುತ್ತದೆ.
ಡರ್ಮಾಕ್ಲಿನಿಕ್ಸ್‌ನ ನಿರ್ದೇಶಕರಾದ ಡರ್ಮಟಾಲಜಿಸ್ಟ್ ಮತ್ತು ಕೂದಲು ಕಸಿ ಶಸ್ತ್ರಚಿಕಿತ್ಸಕರಾದ ಡಾ.ಅಮರೇಂದ್ರ ಕುಮಾರ್ ಅವರು ಚಳಿಗಾಲದಲ್ಲಿ ತಲೆಹೊಟ್ಟು ಹೋಗಲಾಡಿಸಲು 10 ವಿಧಾನಗಳನ್ನು ತಿಳಿಸಿದ್ದಾರೆ. ಈ ತಂತ್ರಗಳ ಪಾಲನೆಯಿಂದ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
- ಕೂದಲಿಗೆ ನೇರವಾಗಿ ಶಾಖ ಕೊಡಬೇಡಿ
ಅತಿಯಾದ ಶಾಖ ತಲೆಯ ಮೇಲೆ ಬಿದ್ದಾಗ ಶುಷ್ಕತೆ ಉಂಟಾಗಿ ಕೂದಲಿನ ಚರ್ಮ ಒಣಗಿ ತಲೆಹೊಟ್ಟು ಉಂಟಾಗುತ್ತದೆ. ಸ್ನಾನದ ವೇಳೆ ಕೂದಲು ಒದ್ದೆಯಾದಾಗ ಹೇರ್ ಡ್ರೈಯರ್ಗಳನ್ನು ಬಳಸಿ ಕೂದಲನ್ನು ಒಣಗಿಸುತ್ತೇವೆ. ಈ ವೇಳೆ ಶಾಖವು ನೇರವಾಗಿ ಕೂದಲಿನ ಚರ್ಮದ ಮೇಲೆ ಬಿದ್ದಾಗ ಚರ್ಮ ಕಿತ್ತು ತಲೆಹೊಟ್ಟು ಉಂಟಾಗಲು ಕಾರಣವಾಗುತ್ತದೆ. ಇದರಿಂದ ಒದ್ದೆಯಾದ ತಲೆಯನ್ನು ಡ್ರೈಯರ್ನಿಂದ ಒಣಗಿಸುವ ಬದಲು ಗಾಳಿಯಲ್ಲಿ ಒಣಗಿಸಿ. ಇದು ಕೂದಲಿನ ಆರೋಗ್ಯಕ್ಕೆ ಅತ್ಯುಪಕಾರಿಯಾಗಿದೆ.
- ಸಕ್ಕರೆ ಬಳಕೆಯನ್ನು ಕಡಿಮೆ ಮಾಡಿ
ಅತಿಯಾದ ಸಕ್ಕರೆ ಬಳಕೆಯು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ರಕ್ತದಲ್ಲಿ ಅತಿಯಾದ ಸಕ್ಕರೆ ಅಂಶವು ಚಳಿಗಾಲದಲ್ಲಿ ತಲೆಹೊಟ್ಟು ಹೆಚ್ಚಿಸುತ್ತದೆ. ಇದರಿಂದಾಗಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿ ಅದರ ಬದಲಾಗಿ ಜೇನುತುಪ್ಪ ಅಥವಾ ಬೆಲ್ಲವನ್ನು ಬಳಸಿ.
- ಹೆಚ್ಚು ನೀರು ಕುಡಿಯಿರಿ
ಸಾಮಾನ್ಯವಾಗಿ ಚಳಿಗಾಲದಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ. ಇದು ಚರ್ಮ ಮತ್ತು ಕೂದಲನ್ನು ನಿರ್ಜಲೀಕರಣಗೊಳಿಸುತ್ತದೆ. ಇದು ಕೂಡ ತಲೆಹೊಟ್ಟು ಉಂಟಾಗಲು ಕಾರಣವಾಗುತ್ತದೆ. ದಿನಕ್ಕೆ ಸರಾಸರಿ 5 ಲೀಟರ್ ನೀರು ಕುಡಿಯಲೇಬೇಕು. ಚಳಿಗಾಲದಲ್ಲಿ ಇದು ಕಷ್ಟ ಅಂತಾದರೆ ಕನಿಷ್ಠ 4 ಲೀಟರ್ ನೀರನ್ನು ಸೇವನೆ ಮಾಡಲೇಬೇಕು.
- ಬಯೋಟಿನ್ ಮತ್ತು ಸತು ಹೆಚ್ಚಾಗಿ ಬಳಸಿ
ಬಯೋಟಿನ್ ಕೂದಲಿನ ವಿಟಮಿನ್ ಆಗಿದ್ದು, ಅದು ವಿವಿಧ ಆಹಾರಗಳಲ್ಲಿ ಕಂಡುಬರುತ್ತದೆ. ಔಷಧಾಲಯಗಳು ಮತ್ತು ಮಾರುಕಟ್ಟೆಗಳಲ್ಲಿ ಇದು ಹೇರಳವಾಗಿ ಲಭ್ಯವಿದೆ. ಚಿಕಿತ್ಸೆಯ ವೇಳೆ ವೈದ್ಯರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಯೋಟಿನ್ ಬಳಸಿದರೆ ಆರೋಗ್ಯಕ್ಕೆ ಉತ್ತಮವಾಗಿದೆ. ಬಯೋಟಿನ್ ಕೊರತೆಯೂ ತಲೆಹೊಟ್ಟಿಗೆ ಕಾರಣವಾಗುತ್ತದೆ.
- ಆಹಾರ ಕ್ರಮವನ್ನು ಬದಲಾಯಿಸಿ
ವಿಟಮಿನ್ ಬಿ, ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕೂದಲು ಮತ್ತು ತಲೆಗೆ ಒಳ್ಳೆಯದು. ಹಣ್ಣುಗಳು ಮತ್ತು ಸಲಾಡ್‌ಗಳು ನಿಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು. ಮೊಟ್ಟೆ, ಮೀನು, ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ.
- ಕೂದಲನ್ನು ಆಗಾಗ್ಗೆ ಉಜ್ಜಿ ತೊಳೆಯಿರಿ
ಕೂದಲನ್ನು ಆಗಾಗ್ಗೆ ತೊಳೆಯುತ್ತಿರಬೇಕು. ಇದರಿಂದ ಕೂದಲಿನ ಮೇಲಿನ ದೂಳು ಮತ್ತು ಕಲ್ಮಶವನ್ನು ದೂರ ಮಾಡಬಹುದು. ಅಲ್ಲದೇ ಉಜ್ಜಿ ತೊಳೆಯುವುದರಿಂದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದು ಕೂದಲು ಮತ್ತು ನೆತ್ತಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
- ಹತ್ತಿಯಿಂದ ಮಾಡಿದ ಟವೆಲ್ ಬಳಸಿ
ನಿಮ್ಮ ಕೂದಲನ್ನು ತೊಳೆದ ನಂತರ, ಹತ್ತಿ ಟವೆಲ್ನಿಂದಲೇ ಒಣಗಿಸಿ. ಒರಟಾದ ಟವೆಲ್ಗಳನ್ನು ಬಳಕೆ ಮಾಡುವುದರಿಂದ ಕೂದಲು ಬೇಗನೇ ಒಣಗದೇ ಮತ್ತು ಹೆಚ್ಚು ಉಜ್ಜುವುದರಿಂದಲೂ ಕೂದಲು ಹಾಳಾಗುವ ಸಾಧ್ಯತೆ ಇರುತ್ತದೆ.
- ಚರ್ಮಶಾಸ್ತ್ರಜ್ಞರನ್ನು ಭೇಟಿ ಮಾಡಿ
ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಮಿತಿ ಮೀರಿದರೆ ನುರಿತ ಚರ್ಮರೋಗ ವೈದ್ಯರ ಸಲಹೆಯನ್ನು ಬೇಗನೇ ಪಡೆಯಿರಿ. ಈ ಸಂದರ್ಭಗಳಲ್ಲಿ ತಜ್ಞರು ನಿಮಗೆ ಉತ್ತಮ ಪರಿಹಾರವನ್ನು ಒದಗಿಸಲು ಸಾಧ್ಯವಾಗುತ್ತದೆ. ಸಮಸ್ಯೆ ಉಂಟಾದಾಗ ವೈದ್ಯರ ಸಲಹೆ ಪಡೆಯಲು ಹಿಂಜರಿಯಬೇಡಿ.
- ಉತ್ತಮ ಶಾಂಪೂವನ್ನು ಮಾತ್ರ ಬಳಸಿ
ಆ್ಯಂಟಿ ಡ್ಯಾನ್ಡ್ರಫ್ ಶ್ಯಾಂಪೂಗಳು ಸತು ಪೈರಿಥಿಯೋನ್ ಅಂಶವನ್ನು ಹೊಂದಿರುತ್ತವೆ. ಇದು ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಮೈಕ್ರೊಬಿಯಲ್ ಆಗಿರುತ್ತವೆ. ಇವುಗಳು ಶಿಲೀಂಧ್ರ, ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತವೆ. ಶಾಂಪೂವನ್ನು ಕೂದಲಿಗೆ ಲೇಪಿಸಿದ 5 ನಿಮಿಷಗಳ ಒಳಗಾಗಿ ನೀರಿನಿಂದ ತೊಳೆಯಬೇಕು. ಇಲ್ಲವಾದಲ್ಲಿ ಕೂದಲಿನ ಶುಷ್ಕತನಕ್ಕೆ ಶಾಂಪೂ ಕೂಡ ಕಾರಣವಾಗುತ್ತದೆ.
- ಕೂದಲು ಮತ್ತು ನೆತ್ತಿಯನ್ನು ಸ್ವಚ್ಛವಾಗಿಡಿ
ಬಿಸಿಲು, ದೂಳಿನಲ್ಲಿ ಹೋಗುವಾಗ ನಿಮ್ಮ ತಲೆಯನ್ನು ಸ್ಕಾರ್ಫ್, ಟೋಪಿಯಿಂದ ರಕ್ಷಿಸಿ. ಅತಿಯಾದ ಬೆವರು ಕೂಡ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವ್ಯಾಯಾಮ, ಓಡಾಟದ ಬಳಿಕ ಕೂದಲನ್ನು ಬೇಗನೆ ಒಣಗಿಸಬೇಕು.
ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಯಿಂದಲೂ ಅತಿಯಾದ ತಲೆಹೊಟ್ಟು ಕಂಡುಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಇದಲ್ಲದೇ ಮಕ್ಕಳಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದು ವಿರಳ. ಒಂದು ವೇಳೆ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ಇದು ಶಿಲೀಂಧ್ರ, ಬ್ಯಾಕ್ಟೀರಿಯಾಗಳ ದಾಳಿಯಿಂದ ಮಾತ್ರವಾಗಿರುತ್ತದೆ. ತಲೆಹೊಟ್ಟು ನಿವಾರಣೆಗೆ ಮನೆ ಮದ್ದು ಬಳಸುವ ಮುನ್ನ ಈ ಬಗ್ಗೆ ನುರಿತ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.