ಇದು ಪ್ರತಿವರ್ಷವೂ ಆಗುವಂಥದ್ದೇ. ಈ ವರ್ಷ ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಅಂದುಕೊಳ್ಳುತ್ತೇವೆ. ಆದರೆ, ನಮ್ಮಲ್ಲಿನ ನವೋತ್ಸಾಹ ಅಬ್ಬಬ್ಬಾ ಅಂದರೂ 2 ರಿಂದ 3 ವಾರ ಮಾತ್ರ ಇರುತ್ತೇನೋ. ಬಳಿಕ ಅದೇ ಉದಾಸೀನತೆ. ಆರೋಗ್ಯ ವಿಚಾರದಲ್ಲೂ ಇದೇ ಕತೆ. ದೇಹವನ್ನು ಈ ವರ್ಷವಾದರೂ ಹುರಿಗೊಳಿಸಬೇಕು ಎಂದು ಡಯಟ್, ಯೋಗ, ಜಿಮ್ ಮಾಡುತ್ತೇವೆ. ಕೆಲ ದಿನಗಳ ಬಳಿಕ ಮತ್ತದೇ ಹಳೇ ಚಾಳಿ. ಇದನ್ನು ತಪ್ಪಿಸಲು ಮತ್ತು ಆರೋಗ್ಯದಾಯಕ ವರ್ಷವನ್ನು ಪೂರೈಸಲು ಕೆಲ ಸಲಹೆಗಳನ್ನು ಪಾಲಿಸೋಣ.
1. ಸಂಸ್ಕರಿಸಿದ ಆಹಾರ ತಿನ್ನಬೇಡಿ
ಗುಣಮಟ್ಟದ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿ. ಅಂದರೆ ಹಣ್ಣುಗಳು, ಧಾನ್ಯಗಳು, ಕಾಳುಗಳು, ಪ್ರೋಟೀನ್ಯುಕ್ತ ಪದಾರ್ಥಗಳನ್ನು ಸೇವನೆ ಮಾಡಬೇಕು. ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಬ್ರೆಡ್, ಮಾಂಸ, ಚೀಸ್, ಮೊದಲೇ ಬೇಯಿಸಿಟ್ಟ ಆಹಾರ ಪದಾರ್ಥಗಳ ಸೇವನೆಯನ್ನು ಕಡ್ಡಾಯವಾಗಿ ಬಿಡಬೇಕು.
2. ಸರಿಯಾದ ಆಹಾರ ಕ್ರಮ ರೂಪಿಸಿ
ನಿಮ್ಮ ದಿನಚರಿಗೆ ಸರಿಹೊಂದುವ ಆಹಾರಕ್ರಮದ ಯೋಜನೆಯನ್ನು ರೂಪಿಸಿ. ಇದು ನಿಧಾನವಾದರೂ ದೀರ್ಘಕಾಲೀನ ಪ್ರಯೋಜನೆಗಳಿಗೆ ಸಹಕಾರಿಯಾಗುತ್ತದೆ. ಸಾಮಾಜಿಕ ಜೀವನ ಮತ್ತು ಕೆಲಸದ ವೇಳೆಗೆ ಸಮನಾಗಿ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ಇದು ಆರೋಗ್ಯದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಬಹುದು.
3. ವಿಟಮಿನ್ ಡಿ ಸತ್ವವನ್ನು ಹೆಚ್ಚಾಗಿ ಪಡೆದುಕೊಳ್ಳಿ
ನೀವು ತಿನ್ನುವ ಆಹಾರದಲ್ಲಿ ವಿಟಮಿನ್ ಡಿ ಸತ್ವ ಹೆಚ್ಚಿರುವಂತೆ ನೋಡಿಕೊಳ್ಳಿ. ಇದು ಮೂಳೆಗೆ ಮಾತ್ರವಲ್ಲದೇ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಾದ ಹೃದಯ ಕಾಯಿಲೆ, ಮಧುಮೇಹದಂತಹ ಮಾರಕ ಕಾಯಿಲೆಗಳನ್ನು ಬಾರದಂತೆ ತಡೆಗಟ್ಟಬಹುದು. ಇದಲ್ಲದೇ ವಿಟಮಿನ್ ಡಿ ಕೂದಲಿನ ಆರೋಗ್ಯಕ್ಕೂ ಸಹಕಾರಿ. ದಿನಕ್ಕೆ 15- 20 ನಿಮಿಷ ಕಾಲ ಸೂರ್ಯನ ಕಿರಣಗಳು ನಿಮ್ಮ ದೇಹದ ಮೇಲೆ ಬೀಳುವಂತೆ ನೋಡಿಕೊಳ್ಳಿ. ಇದು ವಿಟಮಿನ್ ಡಿ ಉತ್ಪತ್ತಿಗೆ ಕಾರಣವಾಗುತ್ತದೆ.
4. ದೈನಂದಿನ ದಿನಚರಿಯಲ್ಲಿ ದೈಹಿಕ ಶ್ರಮ ಇರಲಿ
ಕ್ರೀಡೆ, ವ್ಯಾಯಾಮ, ಓಟ ಯಾವುದಾದರೂ ಒಂದನ್ನು ದಿನವೂ ಮಾಡುವುದರಿಂದ ದೈಹಿಕ ಸಕ್ಷಮತೆ ಕಾಪಾಡಲು ಸಾಧ್ಯ. ಆದ್ದರಿಂದ ದಿನಚರಿಯಲ್ಲಿ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಇಂತಿಷ್ಟು ಸಮಯವನ್ನು ನಿಗದಿ ಮಾಡಿ, ದಿನವೂ ಅಭ್ಯಾಸ ಮಾಡಬೇಕು. ವ್ಯಾಯಾಮ ದೇಹಕ್ಕೆ ಸಾಕಷ್ಟು ಆಮ್ಲಜನಕವನ್ನು ಸರಾಗವಾಗಿ ಸರಬರಾಜು ಆಗುವಂತೆ ನೋಡಿಕೊಳ್ಳುತ್ತದೆ.
5. ಒತ್ತಡ ತಗ್ಗಿಸಿ
ಹೃದ್ರೋಗ, ಸ್ಥೂಲಕಾಯತೆ ಮತ್ತು ಮಧುಮೇಹ ಮತ್ತು ಖಿನ್ನತೆ ಸೇರಿದಂತೆ ಎಲ್ಲಾ ರೋಗಗಳಿಗೆ ಪ್ರಮುಖ ಕಾರಣ ಅಂದರೆ ಅದು ಒತ್ತಡ. ದೈಹಿಕ ಮತ್ತು ಮಾನಸಿಕ ಒತ್ತಡ ಯಾವುದೇ ಆದರೂ ಅದು ಅನಾರೋಗ್ಯಕರ ಬೆಳವಣಿಗೆಯೇ ಸರಿ. ಯಾವುದೇ ಒತ್ತಡವನ್ನು ಮೊದಲು ನಾವು ತೊಡೆದು ಹಾಕಲೇಬೇಕು.
ಈಗಿನ ಜೀವನಕ್ರಮದಲ್ಲಿ ಒತ್ತಡ ಸಹಜ ಎಂಬಂತಾಗಿದೆ. ಈ ಮಧ್ಯೆಯೂ ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ, ಉಚ್ವಾಸ, ನಿಶ್ವಾಸಗಳ ಅಭ್ಯಾಸ, ಆಪ್ತ ಸಮಾಲೋಚನೆ ಅಥವಾ ನಿಮಗೆ ಖುಷಿ ಕೊಡುವ ಯಾವುದೇ ವಿಚಾರಗಳಲ್ಲಿ ನಿಮ್ಮನ್ನು ಅತ್ಯಧಿಕವಾಗಿ ತೊಡಗಿಸಿಕೊಂಡು ಒತ್ತಡವನ್ನು ತಗ್ಗಿಸಿಕೊಳ್ಳಬಹುದು.
6. ಬೆಳಗಿನ ದಿನಚರಿಯನ್ನು ರೂಪಿಸಿ
ಬೆಳಗಿನ ದಿನಚರಿ ಉಲ್ಲಾಸದಾಯವಾಗಿದ್ದರೆ ಅದು ನಿಮ್ಮ ಇಡೀ ದಿನವನ್ನು ಆಹ್ಲಾದಕರವಾಗಿರಿಸುತ್ತದೆ. ಹಾಗಾಗಿ ದಿನ ಆರಂಭದ ಕೆಲಸಗಳು ಹೆಚ್ಚು ಸಂತಸದಾಯವಾಗಿರಲಿ.
7. ಏಳೆಂಟು ತಾಸು ಸುಖನಿದ್ರೆ ಮಾಡಿ
ಕೆಲಸವೇ ನಮಗೆ ಮೊದಲ ಆದ್ಯತೆಯಾಗಿರುತ್ತದೆ. ಈ ವೇಳೆ ನಿದ್ರೆಯನ್ನು ಕಡಿಮೆ ಮಾಡಲು ನಾವು ಕಾಫಿ, ಟೀ ಪಾನೀಯಗಳ ಮೊರೆ ಹೋಗುತ್ತೇವೆ. ಇದು ನಿದ್ರೆಯನ್ನು ಭಂಗ ಮಾಡುತ್ತದೆ. ಹೀಗೆ ಮಾಡುವುದರಿಂದ ಕ್ರಮೇಣ ದೇಹದ ದೃಢತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.
ನಿದ್ರಾಹೀನತೆಯಿಂದ ನರಮಂಡಲದ ಮೇಲೆ ಪರಿಣಾಮ ಬೀರಿ, ತೂಕ ಹೆಚ್ಚಾಗುವುದು, ಖಿನ್ನತೆಗೆ ಒಳಗಾಗುವುದು ಸೇರಿದಂತೆ ನಾನಾ ರೀತಿಯ ವ್ಯಾದಿಗಳಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ 7-8 ಗಂಟೆ ಸುಖನಿದ್ರೆ ಮಾಡಲೇಬೇಕು.
8. ನಿಮ್ಮ ನಂಬಿಕೆಯನ್ನು ಬಲಪಡಿಸಿ
ನೀವು ಯಾವುದೇ ವಿಷಯ, ವ್ಯಕ್ತಿ, ವಿಚಾರವನ್ನು ನಂಬುವುದಾದರೆ ಅದರ ಮೇಲೆ ಇನ್ನಷ್ಟು ನಂಬಿಕೆಯನ್ನು ಕೇಂದ್ರೀಕರಿಸಿ. ಆಗ ನೀವು ಸಕಾರಾತ್ಮಕ ಮನೋಭಾವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಾಧ್ಯ.
ಮಾಡುವ ಕೆಲಸದ ಮೇಲೆ ನಮಗೆ ನಂಬಿಕೆ, ಪ್ರೀತಿ ಇರಬೇಕು. ಅರೆ ಮನಸ್ಸಿನಿಂದ ಕೆಲಸ ಮಾಡುತ್ತಿದ್ದರೆ ಆ ಕೆಲಸ ಎಂದಿಗೂ ಪರಿಪೂರ್ಣವಾಗದು. ಅಲ್ಲದೇ ವಿನಾಕಾರಣ ನಿಮ್ಮಲ್ಲಿ ನಿರುತ್ಸಾಹವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೆಲದಲ್ಲಿ ಹೆಚ್ಚು ಶ್ರಮ ಮತ್ತು ಖುಷಿಯಿಂದ ಮಾಡಿದರೆ ಅದು ನಿಮ್ಮನ್ನು ಇನ್ನಷ್ಟು ಉತ್ತೇಜಿಸುತ್ತದೆ.