ತಮಗೆ ಕೋವಿಡ್-19 ಕಾಯಿಲೆ ಬಂದಿದೆ ಎಂದು ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಕೋವಿಡ್ ಬಂದಿದ್ದು ಸತ್ಯವೋ ಅಥವಾ ಸುಳ್ಳೋ ಎಂಬುದರ ತಪಾಸಣೆಗೆ ಒಳಗಾಗದೆ, ಕೇವಲ ಲಕ್ಷಣಗಳಿಗೆ ಹೆದರಿ ಕೆಲವರು ಸಾವಿಗೆ ಶರಣಾಗುತ್ತಿರುವುದು ದುರ್ದೈವ.
ವಾಸ್ತವದಲ್ಲಿ ಕೋವಿಡ್ನಿಂದ ಸಂಭವಿಸುತ್ತಿರುವ ಮರಣಗಳ ಸಂಖ್ಯೆ ಈ ಮುಂಚೆ ನಿರೀಕ್ಷೆ ಮಾಡಿದ್ದಕ್ಕಿಂತಲೂ ಕಡಿಮೆ ಇದೆ. ದಿ ಲಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್ ಸಮೀಕ್ಷೆಯ ಪ್ರಕಾರ, ಕೋವಿಡ್ ಸೋಂಕಿತರಲ್ಲಿ ಮರಣ ಪ್ರಮಾಣ ಶೇ. 0.66 ರಷ್ಟಿದೆ. ಅಂದರೆ ಪ್ರತಿ 10 ಲಕ್ಷ ಕೋವಿಡ್ ರೋಗಿಗಳಲ್ಲಿ 660 ಜನ ಸಾವಿಗೀಡಾಗುವ ಸಾಧ್ಯತೆಗಳಿರುತ್ತವೆ. ಅದೇ ರೀತಿ ಸಾಮಾನ್ಯ ಪ್ಲೂ ಕಾಯಿಲೆಯ ಮರಣ ಪ್ರಮಾಣ 100 ರಷ್ಟಿದೆ. ಕೋವಿಡ್-19 ಫ್ಲೂಗಿಂತಲೂ ಅತಿ ಹೆಚ್ಚು ಮಾರಣಾಂತಿಕವಾಗಿದ್ದು, ಋತುಮಾನಗಳಿಗುಣವಾಗಿ ಮತ್ತೆ ಮತ್ತೆ ಬರಬಹುದು.
ವೈರಸ್ನಿಂದಾಗುವ ಮರಣ ಪ್ರಮಾಣ: ಕೋವಿಡ್ ಸೋಂಕಿತ ಹಾಗೂ ಶಂಕಿತ ಎರಡನ್ನೂ ಸೇರಿಸಿದಲ್ಲಿ ಮರಣ ಪ್ರಮಾಣ ಶೇ. 0.66 ಇದೆ. ಕೋವಿಡ್ ದೃಢಪಟ್ಟ ಪ್ರಕರಣಗಳಲ್ಲಿ ಈ ಪ್ರಮಾಣ 1.38 ರಷ್ಟಿದೆ. ದೃಢಪಟ್ಟ ಪ್ರಕರಣಗಳಲ್ಲಿ ಸರಾಸರಿ ಮರಣ ಪ್ರಮಾಣ ಶೇ.2 ರಿಂದ ಶೇ.8 ಹಾಗೂ ಒಟ್ಟಾರೆ ಪ್ರಕರಣಗಳಲ್ಲಿ ಶೇ. 0.2 ರಿಂದ ಶೇ.1.6 ರಷ್ಟಿದೆ ಎಂದು ಸದ್ಯಕ್ಕೆ ಪರಿಗಣಿಸಲಾಗಿದೆ.
ವಯಸ್ಸು ಹಾಗೂ ಕೊರೊನಾ ನಂಟು: ಕೊರೊನಾ ಪೀಡಿತ 80 ವರ್ಷಕ್ಕೂ ಮೇಲ್ಪಟ್ಟ ಶೇ.20 ರಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯ. 30 ವರ್ಷ ಕೆಳಗಿನವರಿಗೆ ಈ ಪ್ರಮಾಣ ಶೇ.1 ರಷ್ಟು ಮಾತ್ರ.
ಆತ್ಮಹತ್ಯೆಗೆ ಕಾರಣವಾಗುವ ಆತಂಕಗಳಾದರೂ ಏನು?
- ತನ್ನ ಕುಟುಂಬ ಸದಸ್ಯರಿಗೆ ಕೊರೊನಾ ಹರಡುವ ಭೀತಿ
- ಕೊರೊನಾ ಸಂಬಂಧಿತ ಸುದ್ದಿ, ವಿಡಿಯೋಗಳನ್ನು ಸತತವಾಗಿ ನೋಡುತ್ತಿರುವುದು
- ಅವರಿಗೆ ಇರುವ ಕೊರೊನಾ ಲಕ್ಷಣಗಳು ನನ್ನಲ್ಲೂ ಕಾಣಿಸಿಕೊಳ್ಳುತ್ತಿವೆ ಎಂಬ ಭಯ
- ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಶೇ.43 ರಷ್ಟು ಜನ ಉದ್ವೇಗ ಅಥವಾ ಒತ್ತಡದ ಕಾರಣಗಳಿಂದ, ಶೇ.25 ರಷ್ಟು ಜನ ಆರೋಗ್ಯದ ಭಯದಿಂದ, ಶೇ.21 ರಷ್ಟು ಜನ ಸಂಬಂಧಗಳ ಭಯದಿಂದ ಹಾಗೂ ಶೇ.19 ರಷ್ಟು ಜನ ಒಂಟಿತನಗಳ ಕಾರಣದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
- ಸೋಂಕು ದೃಢಪಟ್ಟಿದ್ದರಿಂದ ರೋಗಿಯ ಕುಟುಂಬಸ್ಥರು ಸಮಾಜದಲ್ಲಿ ಎದುರಿಸುತ್ತಿರುವ ತಿರಸ್ಕಾರದ ಭಯ
- ನಕಾರಾತ್ಮಕ ಚಿಂತನೆಗಳು
ಆತಂಕ ದೂರಗೊಳಿಸಿ, ಜಾಗೃತರಾಗಿರಿ - ಕೊರೊನಾ ವಿರುದ್ಧ ದಿಟ್ಟತನದಿಂದ ಹೋರಾಡಿ
ಸೋಶಿಯಲ್ ಮೀಡಿಯಾ ಹಾಗೂ ಕ್ಷಣ ಕ್ಷಣದ ಸುದ್ದಿವಾಹಿನಿಗಳಿಂದ ದೂರವಿರಿ: ಕೊರೊನಾ ಕುರಿತಾದ ಅಧಿಕೃತ ಮಾಹಿತಿ ಮೂಲಗಳನ್ನು ಮಾತ್ರ ಪರಿಶೀಲಿಸಿ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ರೀತಿಯ ಕೆಲವೇ ಅಧಿಕೃತ ತಾಣಗಳಿಂದ ಸತ್ಯ ಮಾಹಿತಿ ಪಡೆದುಕೊಳ್ಳಿ. ಕೊರೊನಾ ಕುರಿತು ಪದೇ ಪದೇ ಗೂಗಲ್ ಮಾಡಲೇಬೇಡಿ.
ಸತ್ಯ ತಿಳಿದುಕೊಳ್ಳಿ: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಾಗಂತ ಅದು ನಿಮಗೆ ಬಂದೇ ಬಿಡುತ್ತದೆ ಎಂದು ವಿನಾಕಾರಣ ಚಿಂತಿಸಬೇಕಿಲ್ಲ. ಸಾಂಕ್ರಾಮಿಕ ರೋಗ ಎಂಬುದು ಅದರ ಮಾರಣಾಂತಿಕತೆಯನ್ನು ಹೇಳುವುದಿಲ್ಲ. ಬದಲಾಗಿ ಈ ರೋಗ ಎಷ್ಟು ಬೇಗನೆ ಹರಡುತ್ತದೆ ಎಂಬುದನ್ನು ಮಾತ್ರ ತಿಳಿಸುತ್ತದೆ. ಇಲ್ಲಿಯವರೆಗೆ ಈ ಸೋಂಕು ತಗುಲಿದ ಶೇ.80 ರಷ್ಟು ಜನರಲ್ಲಿ ಸಾಮಾನ್ಯ ಶೀತ ಮತ್ತು ಕೆಮ್ಮಿನ ಲಕ್ಷಣಗಳು ಮಾತ್ರ ಕಂಡು ಬಂದಿವೆ.
ಉದ್ವೇಗ ಸಮಸ್ಯೆ ಇದ್ದಲ್ಲಿ ವೈದ್ಯಕೀಯ ನೆರವು ಪಡೆದುಕೊಳ್ಳಿ: ಒಂದೊಮ್ಮೆ ನೀವು ಖಿನ್ನತೆ, ಉದ್ವೇಗದಿಂದ ಬಳಲುತ್ತಿದ್ದರೆ ದಯವಿಟ್ಟು ವೈದ್ಯಕೀಯ ಸಹಾಯ ಪಡೆಯಲು ಮುಂದಾಗಿ.
ಮನೆಯಲ್ಲಿ ನೀವೇ ನಿಮ್ಮ ಕಾಳಜಿ ವಹಿಸಿ: ಬೇರೆ ನೆಗಡಿ ಹಾಗೂ ಕೆಮ್ಮು ಬಂದಾಗ ಯಾವ ರೀತಿ ಔಷಧಿಗಳನ್ನು ಪಡೆಯುವಿರೋ ಅದೇ ರೀತಿ ಇದನ್ನೂ ನಿಭಾಯಿಸಬೇಕು. ಆದಷ್ಟೂ ಹೆಚ್ಚು ನೀರು ಕುಡಿಯುತ್ತ ದೇಹದಲ್ಲಿ ದ್ರವದ ಪ್ರಮಾಣ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ಅಲ್ಕೊಹಾಲ್ ಸಹವಾಸಕ್ಕೆ ಹೋಗದಿರುವುದೇ ಒಳ್ಳೆಯದು. ಅಲ್ಕೊಹಾಲ್ನಿಂದ ಶರೀರದಲ್ಲಿ ನಿರ್ಜಲೀಕರಣ ಹೆಚ್ಚಾಗುವುದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಆದಷ್ಟೂ ಹೆಚ್ಚು ವಿಶ್ರಾಂತಿ ಪಡೆದುಕೊಳ್ಳಿ ಹಾಗೂ ಸೋಂಕಿನ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಶ್ರಮದ ಕೆಲಸದಿಂದ ದೂರವಿರಿ. ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳನ್ನು ಸೇವಿಸಿ ಲಕ್ಷಣಗಳನ್ನು ದೂರ ಮಾಡಿಕೊಳ್ಳಿ.
ಕೋವಿಡ್ ಭಯದಿಂದ ಆತ್ಮಹತ್ಯೆ ಪ್ರಕರಣಗಳು
12 ಫೆಬ್ರವರಿ, 2020: ಮೂರು ಮಕ್ಕಳ ತಂದೆಯೊಬ್ಬ ತನಗೆ ಕೊರೊನಾ ವೈರಸ್ ಬಂದೇ ಬಿಟ್ಟಿದೆ ಎಂದುಕೊಂಡು ಆತ್ಮಹತ್ಯೆಗೆ ಶರಣಾದ. ಈತ ತಾನಾಗಿಯೇ ಕ್ವಾರಂಟೈನ್ನಲ್ಲಿ ಇದ್ದ. ಕುಟುಂಬಸ್ಥರು ಅಥವಾ ಪರಿಚಯದವರು ಹತ್ತಿರ ಬಂದರೆ ಅವರಿಗೆ ಕಲ್ಲೆಸೆಯುತ್ತಿದ್ದ. ಇದು ಆಂಧ್ರಪ್ರದೇಶದಿಂದ ವರದಿಯಾದ ಪ್ರಕರಣ.
18 ಮಾರ್ಚ್, 2020: ಕೋವಿಡ್ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ದೆಹಲಿಯ ಸಫ್ದರಜಂಗ್ ಆಸ್ಪತ್ರೆಯ ಏಳನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಸಾವಿಗೆ ಶರಣಾಗಿದ್ದ.
23 ಮಾರ್ಚ್, 2020: ಉತ್ತರ ಪ್ರದೇಶದ ಬರೇಲಿ ಹಾಗೂ ಹಾಪೂರ್ಗಳಲ್ಲಿನ ಇಬ್ಬರು ಯುವಕರು ತಮಗೆ ಕೊರೊನಾ ಸೋಂಕು ತಗುಲಿದೆ ಎಂಬ ಶಂಕೆಯ ಭೀತಿಯಿಂದ ನರ ಕತ್ತರಿಸಿಕೊಂಡು ಸಾವಿಗೀಡಾದರು.
23 ಮಾರ್ಚ್, 2020: ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ಯುವಕನೋರ್ವ ರೈಲಿಗೆ ಹಾರಿ ಜೀವ ಬಿಟ್ಟಿದ್ದ. ರೈಲಿನೆದುರು ಹಾರು ಕೆಲವೇ ನಿಮಿಷಗಳ ಮುನ್ನ, ತನಗೆ ಕೊರೊನಾ ದೃಢಪಟ್ಟಿರುವುದಾಗಿ ವರದಿ ಬಂದಿದೆ ಎಂದು ಅಲ್ಲಿದ್ದ ಕೆಲವರ ಬಳಿ ಹೇಳಿಕೊಂಡಿದ್ದ.
29 ಮಾರ್ಚ್, 2020: ತೆಲಂಗಾಣದ ಪ್ರದೇಶವೊಂದರಲ್ಲಿ ಶ್ರೀನಿವಾಸ ಎಂಬ ವ್ಯಕ್ತಿಯೊಬ್ಬರು ತಮಗೆ ಜ್ವರ ಇರುವ ಕಾರಣದಿಂದ ಖಾಸಗಿ ವೈದ್ಯರ ಬಳಿ ತೋರಿಸಿದ್ದರು. ಆತನಿಗೆ ಸಾಮಾನ್ಯ ಜ್ವರವಿರುವುದಾಗಿ ವೈದ್ಯರು ಹೇಳಿದ್ದರು. ಆದರೂ ತನಗೆ ಕೋವಿಡ್ ಬಂದೇ ಬಿಟ್ಟಿದೆ ಎಂದು ಭ್ರಮೆಗೊಳಗಾದ ಆತ ತನ್ನ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
1 ಏಪ್ರಿಲ್, 2020: ಕೋವಿಡ್ ತನಗೂ ತಗುಲಬಹುದು ಎಂಬ ಭೀತಿಯಿಂದ ಕರ್ನಾಟಕದಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ.
3 ಏಪ್ರಿಲ್, 2020: 34 ವರ್ಷದ ಬ್ರಿಟಿಷ ವ್ಯಕ್ತಿಯೊಬ್ಬ ಕೊರೊನಾ ಲಾಕ್ಡೌನ್ನ ಒಂಟಿತನ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡ.
6 ಏಪ್ರಿಲ್, 2020: ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಜಮಾಲ್ಪುರದಲ್ಲಿ ಕೆಮ್ಮು ಹಾಗೂ ನೆಗಡಿಯಿಂದ ಬಳಲುತ್ತಿದ್ದ 34 ವರ್ಷದ ವ್ಯಕ್ತಿಯೋರ್ವ ತನಗೆ ಕೋವಿಡ್ ಬಂದಿದೆ ಎಂಬ ಆತಂಕದಿಂದ ನೇಣಿಗೆ ಶರಣಾದ.
11 ಏಪ್ರಿಲ್, 2020: ಮಹಾರಾಷ್ಟ್ರದ ನಾಸಿಕ್ನಲ್ಲಿ ತನಗೆ ಕೋವಿಡ್ ಬಂದಿದೆ ಎಂದು ಭ್ರಮಿತನಾದ 34 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.