ಗುರುಮಠಕಲ್(ಯಾದಗಿರಿ): ತಾಲೂಕಿನ ಅನಪುರ ಗ್ರಾಮ ಪಂಚಾಯತ್ ನ ದೊಡ್ಡಕೆರೆಯ ಹೂಳೆತ್ತುವ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಪರಿಶೀಲಿಸಿದರು.
ಇಂದು ದೊಡ್ಡಕೆರೆ ಹೂಳೆತ್ತುವ ಕಾಮಗರಿಯನ್ನು ಒಟ್ಟು 334 ಜನ ಕೂಲಿ ಕಾರ್ಮಿಕರು ನಿರ್ವಹಿಸುತ್ತಿದ್ದು, ಅವರಲ್ಲಿ 208 ಜನ ಮಹಿಳೆಯರು ಹಾಗೂ 126 ಪುರುಷರು ಇದ್ದಾರೆ. ಇವರಲ್ಲಿ 121 ಜನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೂಲಿ ಕಾರ್ಮಿಕರಾಗಿದ್ದಾರೆ. ಕೂಲಿ ಕಾರ್ಮಿಕರನ್ನು ಭೇಟಿ ಮಾಡಿದ ಉಪಕಾರ್ಯದರ್ಶಿ ಮುಕ್ಕಣ್ಣ ಅವರು ಕಾರ್ಮಿಕರಿಗೆ ದಿನ ಒಂದಕ್ಕೆ 275 ರೂಪಾಯಿಗಳ ಕೂಲಿ ಸಿಗುತ್ತಿರುವುದನ್ನು ಖಾತರಿಪಡಿಸಿಕೊಂಡರು.
ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ನರೇಗಾ ಯೋಜನೆಯಡಿ ನೀಡುವ ಕೆಲಸವೇ ಅವರಿಗೆ ಆಸರೆಯಾಗಿದೆ ಎಂದು ಬಹುತೇಕ ಕೂಲಿಕಾರರು ಈ ವೇಳೆ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ 'ಕಾಯಕ ಮಿತ್ರ ಆ್ಯಪ್' ಬಳಕೆಯ ಬಗ್ಗೆ ಮೇಟ್ ಗಳಿಗೆ ತಿಳಿಸಿ, ಕಾರ್ಮಿಕರಿಗೂ ಆ್ಯಪ್ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.
ಕೂಲಿ ಕಾರ್ಮಿಕರಗೆ ಕೋವಿಡ್ 19 ರೋಗದ ಕುರಿತು ಮಾಹಿತಿ ನೀಡಿದರು. ತಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು. ಇದೇ ವೇಳೆ, ಗ್ರಾಮ ಪಂಚಾಯ್ತಿ ವತಿಯಿಂದ ಕೂಲಿ ಕಾರ್ಮಿಕರಗೆ ಮಾಸ್ಕ್ ಗಳನ್ನು ವಿತರಿಸಿದರು. ಹಾಗೆಯೇ ಕೆಲಸದ ಸ್ಥಳದಲ್ಲಿ ನೆರಳು, ಕುಡಿವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಂಡರು.