ರಾಯಚೂರು/ಯಾದಗಿರಿ: ಕರ್ನಾಟಕ ರಕ್ಷಣಾ ಸೇನೆ ಹಾಗೂ ಯಶ್ ಅಭಿಮಾನಿ ಸಂಘದಿಂದ ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಪರಸ್ಪರ ಸಿಹಿ ಹಂಚುವ ಮೂಲಕ ನೆಚ್ಚಿನ ನಟನ ಜನ್ಮದಿನ ಆಚರಿಸಿದರು. ಡಾ.ರಾಜ್ ಕುಮಾರ್ ಅವರ ಬಳಿಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಲು ಯಶ್ ಅವರು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಯಶೋಮಾರ್ಗದ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನಾರ್ಹ. ಹೀಗೆ ಅವರು ಎತ್ತರಕ್ಕೆ ಬೆಳೆಯುವ ಮೂಲಕ ಸ್ಯಾಂಡಲ್‌ವುಡ್ ಬೆಳೆಸಲಿ ಎಂದು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಸಾದಿಕ್ ಖಾನ್ ಹಾಗೂ ಅಭಿಮಾನಿಗಳು ಶುಭ ಹಾರೈಸಿದರು.
ಇನ್ನು ಯಾದಗಿರಿಯಲ್ಲೂ ಯಶ್ ಅಭಿಮಾನಿಗಳು ಯಶ್ ಭಾವಚಿತ್ರದ ಪೋಸ್ಟರ್ಗೆ ಕ್ಷೀರಾಭಿಷೇಕ ಮಾಡುವ ಮೂಲಕ ಅಭಿಮಾನ ಮೆರೆದರು. ಅಷ್ಟೇ ಅಲ್ಲದೆ, ಕೇಕ್ ಕತ್ತರಿಸಿ ಯಶ್ ಪರ ಜಯಘೋಷ ಕೂಗಿದರು.