ಯಾದಗಿರಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಹೊಸ ತಿರುವು ಸಿಕ್ಕಿದ್ದು, ಆರೋಪಿಗಳು ಮಹಿಳೆಯನ್ನು ಕಾರ್ನಲ್ಲಿ ಅಪಹರಿಸಿ, ಗ್ಯಾಂಗ್ ರೇಪ್ ಮಾಡಿದ್ದಾರೆಂಬ ಭಯಾನಕ ಸತ್ಯ ಹೊರಬಿದ್ದಿದೆ. ಸದ್ಯ ಗ್ಯಾಂಗ್ರೇಪ್ ಪ್ರಕರಣದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.
ಶಹಾಪುರದಲ್ಲಿ ಬಸ್ ನಿಲ್ದಾಣವೊಂದರಲ್ಲಿ ಯುವತಿ ಬಸ್ಗಾಗಿ ಕಾಯುತ್ತಾ ಕುಳಿತಿದ್ದಳು. ಈ ವೇಳೆ, ಕಾರ್ನಲ್ಲಿ ಆಗಮಿಸಿದ ಕಾಮುಕರು, ಬಲವಂತವಾಗಿ ಮಹಿಳೆಯನ್ನು ಕಾರ್ನಲ್ಲಿ ಅಪಹರಿಸಿ ಶಹಾಪುರ ಹೊರಭಾಗದ ರಸ್ತಾಪುರ ಕ್ರಾಸ್ ಸಮೀಪದ ನಿರ್ಜನ ಪ್ರದೇಶದಲ್ಲಿ ತಡರಾತ್ರಿ ಗ್ಯಾಂಗ್ ರೇಪ್ ಮಾಡಿ ನಂತರ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿದ್ದಲ್ಲದೆ, ಸಿಗರೇಟ್ನಿಂದ ಸುಟ್ಟು ಗಾಯಗೊಳಿಸಿದ್ದಾರೆ ಅಂತ ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ.
ಮಹಿಳೆಗೆ ಆರೋಪಿಗಳು ಮಾಡಿದ್ದೇನು?
ಮಹಿಳೆ ದೂರಿನ ಅನ್ವಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಯೋರ್ವ ಪಿಎಸ್ಐ ಕಾರ್ ಚಾಲಕನಾಗಿದ್ದ, ಮೊದಲು ಈತನನ್ನು ಬಂಧಿಸಿ ಈತನ ಮುಖಾಂತರ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಸಾಮೂಹಿಕ ಅತ್ಯಾಚಾರದ ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿ ಐದು ಸಾವಿರ ರೂಪಾಯಿ ಹಾಗೂ ಮೊಬೈಲ್ ಕಸಿದುಕೊಂಡು ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದರಂತೆ.
ವಿವಿಧ ಐಪಿಸಿ ಸೆಕ್ಷನ್ಗಳ ಅಡಿ ಪ್ರಕರಣ ದಾಖಲು
ಸದ್ಯ ಶಹಾಪುರ ಠಾಣೆಯಲ್ಲಿ, ಸಾಮೂಹಿಕ ಅತ್ಯಾಚಾರ, ಹಲ್ಲೆ, ಜಾತಿ ನಿಂದನೆ, ಬೆದರಿಕೆ ಸೇರಿದಂತೆ 10 ವಿವಿಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಹಾಪುರ ತಾಲೂಕಿನ ನಿವಾಸಿಗಳಾದ ನಿಂಗರಾಜ, ಅಯ್ಯಪ್ಪ , ಭೀಮಾಶಂಕರ ಹಾಗೂ ಶರಣು ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಲಾರಿಗಳ ಮುಖಾಮುಖಿ ಡಿಕ್ಕಿ.. ನಾಲ್ವರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ!
ಮಹಿಳೆಯಿಂದ ಕಿತ್ತುಕೊಂಡಿದ್ದ ಮೊಬೈಲ್, ಕೃತ್ಯಕ್ಕೆ ಬಳಸಿದ ಕಾರು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಆರೋಪಿಗಳು ತಮ್ಮ ತಪ್ಪೊಪ್ಪಿಕೊಂಡಿದ್ದು, ಸ್ಥಳ ಮಹಜರು ಕೂಡ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಖುದ್ದು ತೆರಳಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಯುವತಿಗೆ 75 ಸಾವಿರ ರೂಪಾಯಿ ಪರಿಹಾರ
ಈಗ ಸಂತ್ರಸ್ತ ಯುವತಿಗೆ ಯಾದಗಿರಿ ಜಿಲ್ಲಾಡಳಿತ 50 ಸಾವಿರ ರೂಪಾಯಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಸ್ಥೈರ್ಯ ನಿಧಿಯಿಂದ 25 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆಯ ವಿಚಾರಣೆ ಮುಗಿದ ನಂತರ ಕಲಬುರಗಿಯ ಸ್ಟೇಟ್ ಹೋಮ್ ಫಾರ್ ವಿಮನ್ ಸಂಸ್ಥೆಗೆ ಕರೆತಂದು ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.