ಯಾದಗಿರಿ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರು ರಾಜೀನಾಮೆ ನೀಡಿದ್ದಾರೆ. ರಾಜಶೇಖರಗೌಡ ಅವರ ರಾಜೀನಾಮೆಯಿಂದ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
10 ತಿಂಗಳು ಅಧಿಕಾರ ಅವಧಿ ಬಾಕಿ ಇರುವಾಗಲೇ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರಗೌಡ ಪಾಟೀಲ ಅಜ್ಜಲ್ ರಾಜೀನಾಮೆ ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನ ಖುದ್ದು ಭೇಟಿಯಾಗಿ ಲಿಖಿತ ರೂಪದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಯಾದಗಿರಿ ಜಿಲ್ಲಾ ಪಂಚಾಯತ್ನಲ್ಲಿ 12 ಕಾಂಗ್ರೆಸ್, 11 ಬಿಜೆಪಿ ಮತ್ತು ಜೆಡಿಎಸ್ನ ಒಬ್ಬ ಸದಸ್ಯ ಸೇರಿದಂತೆ 24 ಸದಸ್ಯರ ಬಲವಿದೆ. ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷ ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕಾರದ ಗದ್ದುಗೆ ಏರಿದೆ. ರಾಜಶೇಖರಗೌಡ ಪಾಟೀಲ ಅವರ ಮುನ್ನ 30 ತಿಂಗಳ ಅವಧಿಗಳ ಕಾಲ ಬಸರೆಡ್ಡಿಗೌಡ ಮಾಲಿ ಪಾಟೀಲ ಆಡಳಿತ ನಡೆಸಿ ರಾಜೀನಾಮೆ ನೀಡಿದ್ದರು. ನಂತರ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಏರ್ಪಟ್ಟು ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದೆವತ್ಕಲ್ ಜಿಪಂ ಕ್ಷೇತ್ರದ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು.
ರಾಜಶೇಖರಗೌಡ ಪಾಟೀಲ ಅಧ್ಯಕ್ಷರಾಗುವ ಮುನ್ನ ಪಕ್ಷದ ಹೈ ಕಮಾಂಡ್ ಇವರಿಗೆ 20 ತಿಂಗಳ ಕಾಲ ಅಧಿಕಾರ ನೀಡಲು ಅವಕಾಶ ನೀಡಿತ್ತು ಅಂತ ತಿಳಿದು ಬಂದಿದೆ. ಆದರೆ ಪಕ್ಷದ ಆಂತರಿಕ ಒಪ್ಪಂದದ ಮೇರೆಗೆ ಈಗ ರಾಜಶೇಖರಗೌಡ ಪಾಟೀಲ ವಜ್ಜಲ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅಂತ ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿದೆ.
ಸಾಮಾನ್ಯ ವರ್ಗಕ್ಕೆ ಮೀಸಲು ಇರುವ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಈಗ ಬಹಳಷ್ಟು ಜನ ಜಿಪಂ ಸದಸ್ಯರು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿಗ ಬಂಡಾಯ ಭುಗಿಲೇಳುವ ಸಾಧ್ಯತೆಗಳಿವೆ. ವಜ್ಜಲ್ ಅವರ ರಾಜೀನಾಮೆಯಿಂದ, ಯಾದಗಿರಿ ಜಿಪಂ ಅಧ್ಯಕ್ಷ ಸ್ಥಾನದ ಉಳಿದ 10 ತಿಂಗಳ ಕಾಲಾವಧಿಯ ಅಧಿಕಾರವನ್ನ ಯಾರು ಪೂರೈಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದು, ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಕೈ ಪಾಳಯದಲ್ಲಿ ಅಸಮಾಧಾನವಿಲ್ಲದೆ ಯಾರಿಗೆ ಅಧಿಕಾರ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.