ಯಾದಗಿರಿ: ತನ್ನ ತಾಯಿ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ ಯುವಕನಿಗೆ ಕೇವಲ 24 ಗಂಟೆಯೊಳಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಉದ್ಯೋಗ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೇವೆಯಲ್ಲಿರುವಾಗ ಮೃತರಾದ ಯಾದಗಿರಿ ನಗರದ ದಿ. ಶುಭಲಕ್ಷ್ಮೀ ಮಲ್ಲಿಕಾರ್ಜುನ ಎಂಬುವರ ಮಗ ಗಿರೀಶಕುಮಾರ್ ನೌಕರಿ ಪಡೆದ ಯುವಕನಾಗಿದ್ದಾನೆ. ದಿ. ಶುಭಲಕ್ಷ್ಮೀ ಯಾದಗಿರಿ ಗ್ರೂಪ್ ಡಿ. ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ 2021ರ ಆಗಸ್ಟ್ 21ರಂದು ಮೃತಪಟ್ಟಿದ್ದರು. ಇವರ ಮಗನಾದ ಗಿರೀಶಕುಮಾರ್ ಅನುಕಂಪದ ಆಧಾರದ ಮೇಲೆ ಗ್ರೂಪ್ ಡಿ. ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರೂಪ್ ಡಿ. ಸಿಪಾಯಿ ಹುದ್ದೆಗೆ ನೇಮಕಾತಿ ಆದೇಶ ನೀಡಿದ್ದಾರೆ. ತಹಸೀಲ್ ಕಾರ್ಯಾಲಯದಲ್ಲಿ ಖಾಲಿ ಇರುವ ಗ್ರೂಪ್ ಡಿ. ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಜಿಲ್ಲಾಧಿಕಾರಿಯವರು ಯುವಕನಿಗೆ ಆದೇಶ ಪತ್ರ ಕೊಟ್ಟಿದ್ದಾರೆ. ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಅವರ ಕ್ಷಿಪ್ರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕರ್ತವ್ಯನಿರತ ಪತಿ ಸಾವು.. ಮಹಿಳೆಗೆ ಎರಡೇ ದಿನದಲ್ಲಿ ನೌಕರಿ ನೀಡಿದ ಕಲಬುರಗಿ ಜಿಲ್ಲಾಧಿಕಾರಿ!