ಯಾದಗಿರಿ: ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೂಲಿ ಕಾರ್ಮಿಕರು ನಗರದ ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಬಂದಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಬೆಳೆ ನಷ್ಟವಾಗಿದೆ. ಕೆಲಸವಿಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಎರಡು ತಿಂಗಳಿಂದ ಹಣ ನೀಡುತ್ತಿಲ್ಲ. ಅಲ್ಲದೆ ಉದ್ಯೋಗ ಖಾತ್ರೆಗೆ ನೀಡುವ 249 ರೂಪಾಯಿ ಬದಲಾಗಿ 401 ನೀಡಬೇಕೆಂದು ಆಗ್ರಹಿಸಿದ್ರು.
ಇನ್ನು, ಜಿಲ್ಲೆಯಲ್ಲಿ ಬಡವರಿಗೆ ನೀಡಿರುವ ಅಂಬೇಡ್ಕರ್ ವಸತಿ ಯೋಜನೆ, ಇಂದಿರಾ ವಸತಿ, ರಾಜೀವ್ ಗಾಂಧಿ, ವಾಜಿಪೇಯಿ ಗೃಹ ಯೋಜನೆ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕೂಡಲೇ ವಸತಿ ಮತ್ತು ಉದ್ಯೋಗ ಖಾತ್ರಿ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ರು.