ಯಾದಗಿರಿ: ಅವೈಜ್ಞಾನಿಕವಾಗಿ ನಿರ್ಮಿಸಿದ ರೈಲ್ವೆ ಕೆಳ ಸೇತುವೆಯಿಂದಾಗಿ ಯಾದಗಿರಿ - ಮುದ್ನಾಳ ಮಾರ್ಗವಾಗಿ ಹತ್ತಾರು ಹಳ್ಳಿಗಳಿಗೆ ತೆರಳುವ ರಸ್ತೆಯ ಕೆಳಸೇರುವೆ ಮಾರ್ಗ ಅಸ್ತವ್ಯಸ್ತವಾಗಿದ್ದು. ಇದನ್ನು ಕೂಡಲೆ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಯಾದಗಿರಿಯಿಂದ ಮುದ್ನಾಳ ಮಾರ್ಗವಾಗಿ ತೆರಳುವ ರಸ್ತೆಯ ಮಧ್ಯೆ (ಎಲ್‌ಸಿ 230 ಹಳೆ ಠಾಣಾಗುಂದಿ ಗೇಟ್) ಠಾಣಾಗುಂದಿ ಬಳಿಯ ಚೌಕಿ ತಾಂಡಾದ ರೈಲ್ವೆ ಹಳಿಗಳ ಕೆಳಗೆ ನಿರ್ಮಿಸಲಾದ ಸೇತುವೆ ತೀರ ಅವೈಜ್ಞಾನಿಕವಾಗಿದೆ. ಕಳೆದ ಆರು ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಆಳೆತ್ತರದಷ್ಟು ನಿಂತ ನೀರು ಇದುವರೆಗೆ ಕಡಿಮೆಯಾಗಿಲ್ಲ, ಇದೇ ನೀರಿನಲ್ಲಿಯೇ ಸುತ್ತಮುತ್ತಲ ಗ್ರಾಮಸ್ಥರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಮಳೆಯಿಂದ ಕುಸಿದಿದ್ದ ಸೇತುವೆಯ ತಡೆಗೋಡೆಯನ್ನು ರೈಲ್ವೆ ಇಲಾಖೆಯವರು ಹಾಗೂ ಸಂಬಂಧಿಸಿದ ಗುತ್ತಿಗೆದಾರರು ತಾತ್ಕಾಲಿಕ ತೇಪೆ ಹಾಕಿ ಸರಿಪಡಿಸಿದ್ದರು. ಆದರೆ, ಮೊದಲೇ ನೀರು ನಿಲ್ಲದಂತೆ ಮಾಡಿದ್ದರೆ ಜನರಿಗೆ ಸಂಚಾರಕ್ಕೆ ಅನುಕೂಲವಾಗುತ್ತಿತ್ತು. ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ತಮ್ಮ ಅಳಲು ವ್ಯಕ್ತಡಿಸಿದರು. ಮಳೆ ಬಂದರೆ ಸಂಗ್ರಹವಾಗುವ ನೀರು ಕೆಳಸೇತುವೆಯಲ್ಲಿ ನುಗ್ಗಿ ಆಳೆತ್ತರದಷ್ಟು ನೀರು ಕೆರೆಯಲ್ಲಿ ನಿಂತಂತೆ ಇಂದಿಗೂ ನಿಂತಿರುವುದರಿಂದ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ರೈತರಿಗೆ, ಎತ್ತಿನ ಬಂಡಿ, ಟ್ರ‍್ಯಾಕ್ಟರ್, ಟಂಟಂಗಳು, ದ್ವಿಚಕ್ರ ವಾಹನಗಳು ಸಂಚರಿಸಲು ಆಗದಂತೆ ನೀರು ನಿಂತಿದೆ.
ನೀರು ನಿಲ್ಲುವಿಕೆಯಿಂದ ರೈಲ್ವೆ ಸೇತುವೆ ತೇವಾಂಶ ಉಂಟಾಗಿ ಸಮ್ಯಸೆ ಉಂಟಾಗುವ ಸಂಭವವಿದ್ದು, ರೈಲು ಸಂಚರಿಸುವಾಗ ಅನಾಹುತ ಸಂಭವಿಸಿದರೆ ದೊಡ್ಡ ದುರಂತವೇ ನಡೆಯುವ ಸಾಧ್ಯತೆ ಇದೆ. ಈ ಅವೈಜ್ಞಾನಿಕ ಸೇತುವೆ ಮೇಲೆ ಡಬಲ್ ರೈಲು ಮಾರ್ಗಗಳು ಇರುವುದರಿಂದ ಅಪಾಯದ ಸಾಧ್ಯತೆ ಇನ್ನು ಹೆಚ್ಚಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತ್ವರಿತವಾಗಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಗ್ನಿಸಾಕ್ಷಿಯೂ ಇಲ್ಲ, ಮಾಂಗಲ್ಯವೂ ಇಲ್ಲ; ನಿರ್ಭಯವಾಗಿ ನಡೆದ ಅಂತರ್ಜಾತಿ ವಿವಾಹ
ಈ ಬಗ್ಗೆ ಮಾತನಾಡಿದ ಸ್ಥಳೀಯ ಉಮೇಶ್ ಮುದ್ನಾಳ, ‘‘ರೈಲ್ವೇ ಮಾರ್ಗದಿಂದಾಗಿ ಜನಸಮಾನ್ಯರಿಗೆ ತೊಂದರೆಯಾಗ ಬಾರದು ಎಂದು ಸರ್ಕಾರ ಕೋಟಿ ಗಟ್ಟಲೆ ಖರ್ಚು ಮಾಡಿ ಕೆಳಸೇತುವೆಯನ್ನು ನಿರ್ಮಾಣ ಮಾಡಿದರು, ಆದರೆ, ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣ ಮಾಡಿದ ಆರೇ ತಿಂಗಳಿಗೆ ಕುಸಿದು ಬಿದ್ದ ಉದಾಹರಣೆಗಳಿವೆ. ಈ ಬಗ್ಗೆ ರೈಲ್ವೆ ಸಚಿವರಿಗೂ ಗೊತ್ತಾಗ ಬೇಕಿದೆ, ಇಷ್ಟು ಹಣ ಖರ್ಚು ಮಾಡಿದರು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘‘ದಿನನಿತ್ಯ ಶಾಲೆಗೆ ತೆರಳುವ ಮಕ್ಕಳು ಸಹ ಭಯಬೀತರಾಗಿ ಸೇತುವೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಸುರಿದ ನೀರು ಇನ್ನೂ ನಿಂತಲ್ಲಿಯೇ ನಿಂತಿದೆ, ಆದಷ್ಟು ಬೇಗ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸೇತುವೆಯಿಂದಾಗಿ ಯಾರಿಗಾದರೂ ತೊಂದರೆ ಉಂಟಾದಲ್ಲಿ ನೇರವಾಗಿ ರೈಲ್ವೇ ಸಚಿವರು ಮತ್ತು ಅಧಿಕಾರಿಗಳು ಹೊಣೆ'' ಎಂದು ಉಮೇಶ್ ಮುದ್ನಾಳ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕಲುಷಿತ ನೀರು ಸೇವನೆ: ಇಬ್ಬರು ಮೃತ, 34ಕ್ಕೂ ಹೆಚ್ಚು ಜನರು ಅಸ್ವಸ್ಥ