ಯಾದಗಿರಿ : ಸುರಪುರ ನಗರಸಭೆಯಿಂದ ಕಲಬುರ್ಗಿಗೆ ಹೋಗುವ ನಾಲ್ವಡಿ ರಾಜಾವೆಂಕಟಪ್ಪ ನಾಯಕ ವೃತ್ತದವರೆಗಿನ 3 ಕಿ.ಮೀ ಉದ್ದದ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ಜನತೆ ಓಡಾಡಲು ಭಯ ಪಡುವಂತಾಗಿದೆ.
3 ಕಿ.ಮೀ ರಸ್ತೆಯಲ್ಲಿ ಕೇವಲ ಮೂರು ಮರ್ಕ್ಯುರಿ ಲೈಟ್‌ಗಳನ್ನ ಬಿಟ್ಟರೆ ಇನ್ನುಳಿದ ಕಂಬಗಳಿಗೆ ದೀಪವಿಲ್ಲದೆ ಇಡೀ ರಸ್ತೆಯಲ್ಲಿ ಕತ್ತಲು ಆವರಿಸಿಕೊಂಡಿದೆ. ಅನೇಕ ಸಂಘ-ಸಂಸ್ಥೆಗಳು ನಗರಸಭೆಗೆ ಈ ಬಗ್ಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಗೂ ಶಾಸಕ ನರಸಿಂಹ ನಾಯಕ ರಾಜುಗೌಡ ಅವರು ಸಭೆ ನಡೆಸಿ,ನಗರದ ಯಾವುದೇ ರಸ್ತೆಗಳಲ್ಲಿ ಬೀದಿದೀಪ ಇಲ್ಲವೆಂದು ಜನ ಹೇಳಬಾರದು. ಆ ರೀತಿಯಲ್ಲಿ ದೀಪಗಳನ್ನ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.
ಆದರೆ, ನಗರಸಭೆ ಎಷ್ಟೇ ಮನವಿ ಮಾಡಿದ್ರೂ ಬೀದಿದೀಪ ಅಳವಡಿಕೆಗೆ ಮುಂದಾಗಿಲ್ಲ. ಮಳೆಗಾಲ ಸಮೀಪಿಸುತ್ತಿರುವುದರಿಂದ ಕೂಡಲೇ ಬೀದಿ ದೀಪಗಳನ್ನ ಅಳವಡಿಸಬೇಕು. ಇಲ್ಲವಾದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.