ಯಾದಗಿರಿ: ಸ್ವಾಮೀಜಿಗಳಾದವರು ಮಂತ್ರಿಯಾಗು ಎಂದು ಆಶೀರ್ವಾದ ಮಾಡಬೇಕೇ ಹೊರತು, ಮಂತ್ರಿಯನ್ನಾಗಿ ಮಾಡಿ ಎಂದು ಹೇಳಬಾರದು ಎಂಬುದಾಗಿ ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಯಾದಗಿರಿ ತಾಲೂಕಿನ ಅಬ್ಬೆತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳಾದವರು ಆಶೀರ್ವಾದವನ್ನು ಮಾತ್ರ ಮಾಡಬೇಕು. ಸ್ವಾಮೀಜಿಯಾದವನು ಸಿದ್ಧಿಪುರುಷನಾಗಿದ್ದರೆ ಆತ ಆಡಿದ ಮಾತುಗಳು ನೆರವೇರುತ್ತವೆ. ನೀನು ಮಂತ್ರಿಯಾಗು ಎಂದರೆ ಆ ವ್ಯಕ್ತಿ ಮಂತ್ರಿಯಾಗಿಬಿಡುತ್ತಾನೆ. ಅಂತಹ ಸಿದ್ಧಿ ಆತನಲ್ಲಿ ಇರಬೇಕು ಎಂದು ಹೇಳಿದರು.
ಸಿದ್ಧಿ ಪುರುಷನಾಗಲು ಸಾಧ್ಯವಾಗದವನು ಕಾವಿ ಬಟ್ಟೆ ತೊಡಬಾರದು, ಕಾವಿ ಧರಿಸಿಕೊಂಡು ರಾಜಕೀಯ ಮಾಡುವುದು ಅಥವಾ ರಾಜಕೀಯ ಕ್ಷೇತ್ರದಲ್ಲಿ ತೊಡಗುವುದು ಸಮಂಜಸವಲ್ಲ ಎಂದು ಗುಡುಗಿದ್ದಾರೆ.