ಸುರಪುರ: ಜಗತ್ತು ವಿಶಾಲವಾಗಿದೆ ಅಂತಾರೆ. ಅದ್ರೆ ಅದೇ ವಿಶಾಲವಾದ ಜತ್ತಿನಲ್ಲಿ ಮಾನವೀಯತೆ ಮಾತ್ರ ಅಣುವಿನಾಕಾರದಲ್ಲಿ ಇದೆ. ಕಳೆದ ಐದು ವರ್ಷಗಳಿಂದ ವಯೋವೃದ್ಧೆಯೊಬ್ಬರು ಸಣ್ಣ ಗುಡಿಸಲಲ್ಲಿ ವಾಸವಾಗಿದ್ದು, ವಿಶಾಲ ಜಗತ್ತಿನಲ್ಲಿ ವಾಸಿಸುವ ಮಾನವರಿಗೆ ಕಾಣಲೇ ಇಲ್ಲ.
ನಗರದ ಗೋಗಿಕೇರಾ ವಾರ್ಡಿನಲ್ಲಿ ಕಳೆದ ಐದು ವರ್ಷಗಳಿಂದ ವಾಸವಾಗಿರುವ ಗುರುಬಾಯಿ ಎಂಬ ಮಹಿಳೆ, ಹಳೆ ಕಬ್ಬಿಣ, ದನಗಳ ಮೂಳೆ ಮತ್ತಿತರೆ ಹಳೆ ವಸ್ತುಗಳನ್ನು ಆಯ್ದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಳು. ಕಳೆದ 20 ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ ಮಂಜೂರಾದ ಒಂದು ಕೋಣೆಯಲ್ಲಿ ಜೀವನ ನಡೆಸುತ್ತಿದ್ದಳು. ವಿಧಿಯಾಟ! ಇದ್ದ ಒಂದು ಮನೆ ಐದು ವರ್ಷದ ಹಿಂದೆ ಬಿದ್ದು ಹೋಗಿದೆ. ಅಲ್ಲಿಂದ ಇಲ್ಲಿಯವರೆಗೆ ಕೇವಲ 4, 5 ಅಡಿ ಸುತ್ತಳತೆಯ ಗುಡಿಸಲಲ್ಲಿ ವಾಸವಿದ್ದಾಳೆ.
ಇತ್ತ ಮದುವೆಯಾದ ಮಹಾಶಯ ಇಪ್ಪತ್ತು ವರ್ಷದ ಹಿಂದೆಯೇ ಇವಳನ್ನು ಬಿಟ್ಟು ಬೇರೆ ಮದುವೆಯಾಗಿದ್ದಾನೆ ಪುಣ್ಯಾತ್ಮ. ಒಬ್ಬಳು ಮಗಳಿದ್ದು ಅವಳನ್ನು ಈ ಸಮಾಜ ದೇವದಾಸಿಯನ್ನಾಗಿ ಮಾಡಿದೆ. ಈಗ ಮಗಳು ತರಕಾರಿ ಮಾರಾಟ ಮಾಡಿ ಬಂದ ಹಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಸರ್ಕಾರ ಇದುವರೆಗೂ ಇವರಿಗೆ ಆಧಾರವೂ ಆಗಿಲ್ಲ, ಆಧಾರ್ ಕಾರ್ಡ್ನ್ನೂ ನೀಡಿಲ್ಲ.
ಅದು ಬಿಡಿ ವೃದ್ಧಾಪ್ಯ ವೇತನ ಅಂದ್ರೆ ಏನು ಅಂತಾನೂ ಗೊತ್ತಿಲ್ಲ. ಪಡಿತರ ಚೀಟಿ ಇದ್ದರೂ ಮಹಿಳೆಯ ಆಧಾರ ಕಾರ್ಡ್ ಇಲ್ಲವೆಂದು ಅದು ಕೂಡ ರದ್ದಾಗಿದೆ. ಈಗ ಅಕ್ಕ ಪಕ್ಕದ ಮನೆಯವರು ಊಟ ಕೊಡುತ್ತಿದ್ದಾರೆ. ಸದ್ಯ ಲಾಕ್ಡೌನ್ನಿಂದಾಗಿ ಕೆಲಸ ಮಾಡಲು ಆಗದೆ ಜೀವನ ನಡೆಸಲು ತುಂಬಾ ಕಷ್ಟಪಡುವಂತಾಗಿದೆ ಎಂದು ಕಣ್ಣೀರು ಸುರಿಸುತ್ತಿದ್ದಾಳೆ.
ಸದ್ಯ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮಹಿಳೆಯ ಕರುಣಾಜನಕ ಸ್ಥಿತಿ ಗಮನಿಸಿದ ಟೀಂ ರಾಜುಗೌಡ ಸೇವಾ ಸಮಿತಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮನೆ ದುರಸ್ತಿ ಮಾಡಿಸಿಕೊಡುವ ಭರವಸೆ ನೀಡಿದೆ. ಸ್ವಾರ್ಥ ಜಗತ್ತಿನಲ್ಲಿ ಇಂಥವರಿಗೂ ಸಹಾಯದ ಅವಶ್ಯಕತೆಯಿದೆ. ಈಗಲಾದರೂ ಸರ್ಕಾರ ಇವರ ನೆರವಿಗೆ ಬರಬೇಕಿದೆ.