ಯಾದಗಿರಿ/ ಸುರಪುರ: ಕೊರೊನಾ ಲಾಕ್‌ಡೌನ್ ಉಲ್ಲಂಘಿಸಿ ಹೊರಗೆ ಬರುವವರ ಬೈಕ್ ಸೀಜ್ ಮಾಡಿ ಲಾಠಿ ರುಚಿ ತೋರಿಸುತ್ತಿದ್ದ ಪಿಎಸ್ಐ ಚೇತನ್ ಬಿದರಿ ಇಂದು ಜನರಿಗೆ ಮಾಸ್ಕ್ ವಿತರಿಸಿ ಕೊರೊನಾ ಬಗ್ಗೆ ಅರಿವು ಮೂಡಿಸಿದರು.
ಗ್ರಾಮೀಣ ಪ್ರದೇಶದಿಂದ ಬರುವ ಜನರ ವಾಹನಗಳನ್ನು ಕೆಂಭಾವಿ ರಸ್ತೆಯಲ್ಲಿ ನಿಲ್ಲಿಸಿ ಜನರಿಗೆ ಮಾಸ್ಕ್ ನೀಡಿ ಮುಂದೆ ಸುರಪುರಕ್ಕೆ ಬರುವುದಾದರೆ ಮಾಸ್ಕ್ ಧರಿಸಿಯೇ ಬರಬೇಕು. ಇಲ್ಲವಾದರೆ ನಗರ ಪ್ರದೇಶಕ್ಕೆ ಬರಲು ಬಿಡುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಅಲ್ಲದೆ ಅನೇಕರಿಗೆ ಸ್ವತಃ ತಾವೇ ಮಾಸ್ಕ್ ಹಾಕಿ ಮೆಚ್ಚುಗೆ ಪಡೆದರು. ಪೊಲೀಸರೆಂದರೆ ಬರೀ ದಂಡಿಸುವರೆಂಬ ಆರೋಪದ ಮಧ್ಯೆ ಪಿಎಸ್ಐ ಚೇತನ್ ಬಿದರಿಯವರ ಜನಪರ ಕಾರ್ಯ ನಗರದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.