ಗುರುಮಠಕಲ್ : ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ಕಾಲ ಕಳೆಯುತ್ತಿದ್ದರೂ ತಾಲೂಕು ಕಚೇರಿಗೆ ಮಾತ್ರ ಇನ್ನೂ ಗ್ರಹಣ ಬಿಟ್ಟಿಲ್ಲ. ಇಲ್ಲಿನ ನಾಡ ಕಚೇರಿ (ಉಪ ತಹಶೀಲ್ದಾರ್)ಯಲ್ಲಿ ಮಳೆ ನೀರು ನಿಂತಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಅಲ್ಲದೇ, ಕಟ್ಟಡದಲ್ಲಿನ ಗಣಕಯಂತ್ರ ಹಾಗೂ ವಿದ್ಯುತ್ ಸೌಲಭ್ಯಕ್ಕಾಗಿ ಇಡಲಾದ ಬ್ಯಾಟರಿ ಕೋಣೆಯಲ್ಲಿಯೇ ಮಳೆ ನೀರು ಸೋರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ರೈತರ ಕಂದಾಯ ದಾಖಲೆಗಳು ಸುರಕ್ಷಿತವಾಗಿರಬೇಕಾಗಿರುವ ಸ್ಥಳದಲ್ಲಿ ಈಗ ಮಳೆ ನೀರು ಸೋರುತ್ತಿರುವುದರಿಂದ ಸುಮಾರು 3 ಇಂಚು ಎತ್ತರದವರೆಗೆ ನೀರು ತುಂಬಿ ಕಚೇರಿಯೊಳಗೆ ಬಾವಿಯಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಕಚೇರಿಯೊಳಗೆ ಅನಿವಾರ್ಯ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಉಪ ತಹಶೀಲ್ದಾರರಾದ ಎಜಾಜ್ ಹುಲ್ ಹಕ್ ಮತ್ತು ಸಿಬ್ಬಂದಿ ವಿದ್ಯುತ್ ಸ್ಪರ್ಶ (ಶಾರ್ಟ್ ಸರ್ಕ್ಯೂಟ್)ದಿಂದ ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇಕ್ಕಟಿನ ಸ್ಥಳ ಇದಾಗಿರುವುದರಿಂದ ಪುರಸಭೆಯಲ್ಲಿ ಒಂದು ಕೋಣೆ ಪಡೆದು ತಹಶೀಲ್ದಾರ್ ಕಚೇರಿಯ ಕೆಲವು ಸಿಬ್ಬಂದಿಯನ್ನು ಅಲ್ಲಿಗೆ ಕಳಿಸಿ ಕಂದಾಯ ಇಲಾಖೆಯ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ, ಕಂದಾಯ ಇಲಾಖೆಯ ಮುಖ್ಯ ಕಾರ್ಯಗಳಾದ ಅಭಿಲೇಖಾಲಯ (ಹಳೆಯ ಪಹಣ ದಾಖಲೆಗಳು), ಭೂಮಿ ಪಹಣಿ ಮುಂತಾದವುಗಳನ್ನು ಸ್ಥಳಾಂತರಿಸಿಲ್ಲ. ಮಳೆ ಬಂದ್ರೆ ಶಿಥಿಲೀಕರಣ ಗೋಡೆಯಿಂದ ಕಚೇರಿ ಸೋರುವುದಲ್ಲದೇ, ರೈತರ ದಾಖಲಾತಿಗಳು ಹಾನಿಯಾಗುತ್ತವೆ ಎಂಬ ಭಯದ ವಾತಾವರಣ ರೈತರಿಗೆ ಮತ್ತು ಅಲ್ಲಿನ ಅಧಿಕಾರಿಗಳಿಗೆ ಉದ್ಭವಿಸಿದೆ.
ಅಭಿಲೇಖಾಲಯ ಕಚೇರಿಯಲ್ಲಿ ದಾಖಲಾತಿಗಳು ಮಳೆಯಿಂದ ಹಾನಿಗೆ ಒಳಗಾದ್ರೆ ರೈತರ ಗತಿಯೇನು ಎಂಬ ಪ್ರಶ್ನೆ ಕಾಡುತ್ತಿದೆ. ಫೆಬ್ರವರಿ 2018ರಂದು ಗುರುಮಠಕಲ್ ತಾಲೂಕು ರಚನೆಯಾಗಿದ್ದರೂ ಉತ್ತಮ ತಹಶೀಲ್ದಾರ್ ಕಚೇರಿ ಹೊಂದಿಲ್ಲ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಉತ್ತಮ ಕಟ್ಟಡಕ್ಕೆ ನಾಡ ಕಚೇರಿ ಸ್ಥಳಾಂತರಿಸಬೇಕು ಎಂಬುದು ರೈತರ ಮತ್ತು ನಾಗರಿಕರ ಒತ್ತಾಯ.