ಯಾದಗಿರಿ: ಜಿಲ್ಲಾಡಳಿತದ ವತಿಯಿಂದ ಮುಂಬೈನಿಂದ ವಾಪಸಾಗಿ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ರೈಲುಗಳ ಸಂಚಾರ ಪ್ರಾರಂಭಗೊಂಡಿದ್ದು, ಮುಂಬೈ-ಬೆಂಗಳೂರು ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಪ್ರತಿನಿತ್ಯ ಮಹಾರಾಷ್ಟ್ರದಿಂದ ನೂರಾರು ವಲಸೆ ಕಾರ್ಮಿಕರು ಜಿಲ್ಲೆಗೆ ವಾಪಸಾಗುತ್ತಿದ್ದಾರೆ. ಹೀಗೆ ವಾಪಸಾದ ವಲಸಿಗರ ಸ್ಕ್ರೀನಿಂಗ್ ಟೆಸ್ಟ್ ಬಳಿಕ ಅವರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ. ಆದ್ರೆ ಜಿಲ್ಲಾಡಳಿತದ ವತಿಯಿಂದ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳು ದೊರಕುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ಹಾಟ್ ಸ್ಪಾಟ್ ಅಂತಾನೇ ಗುರುತಿಸಿಕೊಂಡಿರುವ ಮುಂಬೈ ಸೇರಿದಂತೆ ಮಹಾರಾಷ್ಟ್ರದ ನಾನಾ ಭಾಗಗಳಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಇತ್ತೀಚೆಗೆ ಆಗಮಿಸದ ನೂರಕ್ಕೂ ಹೆಚ್ಚು ಕಾರ್ಮಿಕರನ್ನು ಜಿಲ್ಲೆಯ ಶಹಪುರ ನಗರದ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಈ ಕೇಂದ್ರಗಳಲ್ಲಿ ಮಾತ್ರ ಜಿಲ್ಲಾಡಳಿತ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳು ನಮಗೆ ಸರಿಯಾಗಿ ಊಟ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನ ಪುರೈಸದೆ ನಾವು ನರಕ ಯಾತನೆ ಅನುಭವಿಸುವಂತಾಗಿದೆ. ಕ್ವಾರಂಟೈನ್ ಮಾಡುವ ಮುಂಚೆ ನಮಗೆಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ಅಧಿಕಾರಿಗಳು ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಕೊನೆ ಪಕ್ಷ ನಮ್ಮನ್ನು ನಮ್ಮ ಮನೆಗಳಿಗೆ ತೆರಳಲು ಬಿಡಿ ಎಂದು ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ನಲ್ಲಿರುವವರು ಆಕ್ರೋಶ ವ್ಯಕ್ತಪಡಿಸಿದರು.