ಯಾದಗಿರಿ: ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನೆರೆ ಸಂತ್ರಸ್ತರು ತಮ್ಮ ಗ್ರಾಮಕ್ಕೆ ವಾಪಸ್ ತೆರಳಲು ಮುಂದಾಗಿರುವ ಘಟನೆ ಜಿಲ್ಲೆಯ ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಭೀಮಾ ನದಿ ಪ್ರವಾಹಕ್ಕೆ ಒಳಗಾದ ವಡಗೇರಾ ತಾಲೂಕಿನ ಕುಮನೂರು ಗ್ರಾಮದ ಜನರನ್ನ ಮೊನ್ನೆ ರಾತ್ರಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಳಜಿ ಕೇಂದ್ರಕ್ಕೆ ಜಿಲ್ಲಾಡಳಿತ ಸ್ಥಳಾಂತರಿಸಿತ್ತು. ಆದರೆ, ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಅಂತ ಆರೋಪಿಸಿ ಪರಿಹಾರ ಕೇಂದ್ರ ತೊರೆದು ಗಂಟು ಮೂಟೆ ಸಮೇತ ಕುಮನೂರು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತೆರಳಲು ಮುಂದಾದರು. ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರು ನಮಗೆ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಊರಲ್ಲಿ ದನ ಕರುಗಳನ್ನ ಬಿಟ್ಟು ಒಂದು ಜೊತೆ ಬಟ್ಟೆ ತೆಗೆದುಕೊಂಡು ಇಲ್ಲಿಗೆ ಬಂದಿದ್ದಿವೆ. ನಾವು ಇಲ್ಲಿ ಇರುವುದಿಲ್ಲ ಅಂತ ವಡಗೇರಾ ಕಾಳಜಿ ಕೇಂದ್ರದಲ್ಲಿದ್ದ 102 ಜನ ಸಂತ್ರಸ್ತರ ಪೈಕಿ 70 ಜನ ಸಂತ್ರಸ್ತರು ತಮ್ಮ ಗ್ರಾಮದತ್ತ ಕಾಲ್ನಡಿಗೆ ಮೂಲಕ ತೆರಳಿದ್ದಾರೆ.
ಈಗಾಗಲೇ ಸೊನ್ನ ಬ್ಯಾರೇಜ್ನಿಂದ ಮತ್ತೆ ಭಾರಿ ಪ್ರಮಾಣದಲ್ಲಿ ನೀರು ಬೀಡಲಾಗುತ್ತಿದೆ. ಒಂದು ವೇಳೆ ನದಿ ತೀರದಲ್ಲಿ ಪ್ರವಾಹ ಹೆಚ್ಚಾದರೆ ಕುಮನೂರ ಗ್ರಾಮಕ್ಕೆ ತೆರಳಲು ಹೊರಟ ಸಂತ್ರಸ್ತರ ಮತ್ತಷ್ಟು ಪ್ರವಾಹ ಪರಿಸ್ಥಿತಿ ಎದುರಿಸುವ ಸಾಧ್ಯತೆಗಳಿವೆ. ಕೂಡಲೇ ಜಿಲ್ಲಾಡಳಿತ ಈ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಮುಂದಾಗುವ ಅನಾಹುತ ತಡೆಯಬೇಕಿದೆ.