ಸುರಪುರ(ಯಾದಗಿರಿ): ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಎಕರೆಗೂ ಜಮೀನಿನಲ್ಲಿ ಬೆಳೆದ ಪಪ್ಪಾಯ ಬೆಳೆ ಮಾರಾಟವಾಗದೇ, ಹಣ್ಣಾಗಿ ನೆಲಕ್ಕೆ ಉದುರಿ ನಾಶವಾಗುತ್ತಿದೆ. ಇದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಬಹು ನಿರೀಕ್ಷೆ ಇಟ್ಟುಕೊಂಡು ಬೆಳೆದಿರುವ ಬೆಳೆಗಳು ವ್ಯಾಪಾರಸ್ಥರಿಲ್ಲದೇ, ವ್ಯಾಪಾರವಾಗದೇ ಬೆಳೆದ ಬೆಳೆಗಳನ್ನು ನೋಡುತ್ತಾ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ರೈತರಿಗೆ ಬಂದೊದಗಿದೆ.
ಅನೇಕ ನಿರೀಕ್ಷೆ ಇಟ್ಟುಕೊಂಡು ರೈತರು ಬೆಳೆದಿರುವ ತೋಟಗಾರಿಕೆ ಬೆಳೆಯಾದ ಪಪ್ಪಾಯ ಇನ್ನೇನು ರೈತರ ಕೈ ಸೇರಿತು ಎನ್ನುವ ಹೊತ್ತಿಗೆ ಕೊರೊನಾ ವೈರಸ್ನಿಂದಾಗಿ ಈಡೀ ದೇಶವೇ ಲಾಕ್ ಡೌನ್ ಆಗಿತ್ತು. ಈ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪಪ್ಪಾಯಿ ಹಣ್ಣುಗಳು ಗಿಡದಲ್ಲೇ ಹಣ್ಣಾಗಿ, ಉದುರಿ ಬೀಳುತ್ತಿವೆ.
ಮಾರುಕಟ್ಟೆ ವ್ಯವಸ್ಥೆಯಲ್ಲಿ ಸೂಕ್ತ ಬೆಂಬಲ ಬೆಲೆ ಇಲ್ಲದೆ ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಸಂಪೂರ್ಣ ನೆಲ ಕಚ್ಚಿದ್ದು, ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಹತ್ತಾರು ಜನ ರೈತರು ಬಹು ನಿರೀಕ್ಷೆ ಇಟ್ಟು ಪಪ್ಪಾಯ ಬೆಳೆದಿದ್ದು, ವ್ಯಾಪಾರಸ್ಥರಿಲ್ಲದೇ ಕಂಗಾಲಾಗಿದ್ದಾರೆ.
ಚಿಕ್ಕನಹಳ್ಳಿ ಗ್ರಾಮದ ರೈತರಾದ ಬಸಣ್ಣ ಕಟ್ಟಿಮನಿ, ಯಂಕಪ್ಪ ಹುಣಸಗಿ, ಸಂಜೀವ ದೇವದುರ್ಗ, ರಾಮಚಂದ್ರ ಕಟ್ಟಿಮನಿ ಎಂಬುವರು ತಮ್ಮ ಜಮೀನಿನಲ್ಲಿ ಪಪ್ಪಾಯ ಬೆಳೆದಿದ್ದು, ವ್ಯಾಪಾರವಾಗದೇ ಅಂದಾಜು 30 ರಿಂದ 36 ಲಕ್ಷ ರೂಪಾಯಿಗಳಷ್ಟು ಮೌಲ್ಯದ ಹಣ್ಣುಗಳು ಮಣ್ಣುಪಾಲು ಆಗುತ್ತಿವೆ.
ಕೂಡಲೇ ಸರ್ಕಾರ ರೈತರಿಗೆ ಪರಿಹಾರ ಕಲ್ಪಿಸುವುದರ ಜೊತೆಗೆ ರೈತರು ಬೆಳೆದಿರುವ ಬೆಳೆಯನ್ನು ಖರೀದಿಸಿ ಅನುಕೂಲ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ರೈತರ ನೆರವಿಗಿರುವುದಾಗಿ ಬರೀ ಘೋಷಣೆ ಮಾಡುತ್ತಿರುವ ಸರ್ಕಾರ ಚಿಕ್ಕನಹಳ್ಳಿ ಗ್ರಾಮದ ಈ ರೈತರಿಗೆ ನೆರವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.