ಯಾದಗಿರಿ : ಸುಮಾರು 12 ಸಾವಿರ ಅಧಿಕ ಜನಸಂಖ್ಯೆ ಇರುವ ತಾಲೂಕಿನ ಯರಗೋಳ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಶಾಸಕರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಮೂಲಸೌಕರ್ಯಗಳು ಕೂಡ ಇಲ್ಲ.
ಮಳೆಗಾಲ ಬಂದ್ರೆ ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾಗಿ ಜನ ಸಂಚರಿಸಲು ಹರಸಾಹಸ ಪಡುವಂತಾಗುತ್ತೆ. ಯರಗೋಳ ಗ್ರಾಮದಿಂದ ಯಾಗಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ದುರಸ್ಥಿಯಾಗದೆ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಈ ಕುರಿತು ಸಾಕಷ್ಟು ಬಾರಿ ಶಾಸಕ ನಾಗನಗೌಡ ಕಂದಕೂರ ಮತ್ತು ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ, ಶಾಸಕರು, ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಅತೀ ಹೆಚ್ಚು ಮತ ನೀಡಿ ಗುರಮಿಠಕಲ್ ಶಾಸಕ ನಾಗನಗೌಡ ಕಂದಕೂರ ಅವರನ್ನು ಆಯ್ಕೆ ಮಾಡಿದ್ದೇವೆ. ಆದರೆ, ಚುನಾವಣೆಗೆ ಮತ ಕೇಳಲು ಬಂದ ಅವರು, ಆಮೇಲೆ ಈವರೆಗೂ ಗ್ರಾಮದ ಕಡೆ ತಲೆ ಹಾಕಿಲ್ಲ. ಈ ಹಿಂದಿನ ಜನಪ್ರತಿನಿಧಿಗಳು ಕೂಡ ಇದೇ ರೀತಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯರಗೋಳದಿಂದ ಯಾಗಪುರಕ್ಕೆ ಸಂಪರ್ಕಿಸುವ ರಸ್ತೆಯನ್ನು ಶೀಘ್ರ ದುರಸ್ಥಿ ಮಾಡಬೇಕು. ಜೊತೆಗೆ, ಇತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ, ನಿಮ್ಮ ಮನೆ, ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಶಾಸಕರಿಗೆ ಎಚ್ಚರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.