ಯಾದಗಿರಿ: ಹೊರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿರುವಲ್ಲಿ ಕನಿಷ್ಠ ಸೌಲಭ್ಯ ಮರಿಚೀಕೆಯಾಗಿದೆ ಎಂದು ಕ್ವಾರಂಟೈನ್ನಲ್ಲಿರೋ ಜನರು ಗಂಭೀರವಾಗಿ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಠಾಣೆ, ಮುಂಬೈ ಸೇರಿದಂತೆ ಹಲವೆಡೆಯಿಂದ ಯಾದಗಿರಿ ಜಿಲ್ಲೆಗೆ ವಾಪಸ್ ಆದ 194 ಕಾರ್ಮಿಕರನ್ನು ಶಹಾಪುರ ತಾಲೂಕಿನ ಬೇವಿನಹಳ್ಳಿ(ಜೆ) ಕ್ರಾಸ್ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಆದರೆ, ಇವರಿಗೆ ಮೂಲ ಸೌಲಭ್ಯಗಳಿಲ್ಲದೇ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಸರಿಯಾದ ನೀರು, ಊಟ ಸಿಗದೇ ಪರದಾಡುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ಗರ್ಭಿಣಿಯರು ಮತ್ತು ಮಕ್ಕಳು ಎಲ್ಲರೂ ಕ್ವಾರಂಟೈನ್ ನಲ್ಲಿ ಬಂಧಿಯಾಗಿದ್ದೇವೆ. ಮಕ್ಕಳಿಗೆ ಹಾಲು ಬೇಕು, ನಮಗೆ ಕುಡಿಯಲು ನೀರು ಬೇಕು, ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಹೇಳಿಕೊಂಡ್ರೆ ಬಾತ್ರೂಮ್ ನೀರು ಕುಡಿರಿ ಅಂತಾರೆ ಎಂದು ಸುನೀತಾ ಬಾಯಿ ಎಂಬ ಮಹಿಳೆ ಆರೋಪ ಮಾಡಿದ್ದಾರೆ.
ಇದೇ ಪರಿಸ್ಥಿತಿ ಮುಂದುವರಿದರೆ ನಾವು ಅನ್ನಕ್ಕಾಗಿ ಬಳಲಿ ಜೀವ ಬಿಡುವಂತ ಸ್ಥಿತಿ ಬರುತ್ತದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.