ಸುರಪುರ: ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ ಹಾಗೂ ಉಪಾಧ್ಯಕ್ಷ ಮಹೇಶ್ ಪಾಟೀಲ್ ಅವರ ಪದಗ್ರಹಣ ಸಮಾರಂಭ ನಡೆಯಿತು.
ನೂತನ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಅಧಿಕಾರ ಸ್ವೀಕರಿಸಿ ಮಾತನಾಡಿ, ನಗರದ ಸಮಸ್ಯೆಗಳ ನಿವಾರಣೆಗೆ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಭೇದ ಭಾವವಿಲ್ಲದೆ ಕೆಲಸ ಮಾಡೋಣ. ಎಲ್ಲರೂ ಸೇರಿ ಆಡಳಿತಕ್ಕೆ ಸಹಕಾರ ನೀಡುವಂತೆ ಕೋರಿದರು.
ಉಪಾಧ್ಯಕ್ಷ ಮಹೇಶ್ ಪಾಟೀಲ್ ಮಾತನಾಡಿ, ನಮ್ಮೆಲ್ಲರ ನೆಚ್ಚಿನ ಪ್ರಧಾನಿಯಾದ ನರೇಂದ್ರ ಮೋದಿಯವರ ಮಾರ್ಗದರ್ಶನದಂತೆ ಸ್ವಚ್ಛ ಭಾರತ ಅಭಿಯಾನದ ಮಾದರಿಯಲ್ಲಿ ಸ್ವಚ್ಛ ಸುರಪುರ ನಿರ್ಮಾಣ ಮಾಡೋಣ. ಎಲ್ಲಾ ಸದಸ್ಯರು ಸಹಕಾರ ನೀಡುವ ಜೊತೆಗೆ ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿದರು.
ಮುಖಂಡ ವೇಣುಗೋಪಾಲ ಜೇವರ್ಗಿ ಮಾತನಾಡಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇಂದಿನಿಂದ ನಗರದ ಸಮಸ್ಯೆಗಳ ನಿವಾರಣೆಗೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಅಲ್ಲದೆ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಕರೆ ಮಾಡಿದರೆ ಕರೆ ಸ್ವೀಕರಿಸಿ. ಇಲ್ಲವಾದಲ್ಲಿ ಜನರೊಂದಿಗೆ ಸೇರಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.