ಸುರಪುರ: ಪಟ್ಟಣದ ಕಬಾಡಗೆರಾದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಲ್ಲಿನ ಸುರಪುರ ತಹಶೀಲ್ದಾರ್ ಹೆಸರಿನ ಖಾತೆಯಲ್ಲಿದ್ದ ಸುಮಾರು 75 ಲಕ್ಷ ರೂ.ಯನ್ನು ಅನುಮಾನಾಸ್ಪದವಾಗಿ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ.
ಸುರಪುರ ತಹಶೀಲ್ದಾರ್ ಹೆಸರಿನ ಖಾತೆಯಲ್ಲಿದ್ದ ಸುಮಾರು 75,59, 900 ರೂ. ಮೊತ್ತವನ್ನು 2020ರ ಜೂನ್ 1ರಂದು ಡ್ರಾ ಮಾಡಿಕೊಳ್ಳಲಾಗಿದೆ. ಈ ಘಟನೆ ನಿನ್ನೆ ಬೆಳಕಿಗಿ ಬಂದಿದೆ.
ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ಕೊರೊನಾ ಸೋಂಕಿನಿಂದಾಗಿ ಕಳೆದ ಅನೇಕ ದಿನಗಳಿಂದ ಚಿಕಿತ್ಸೆಗಾಗಿ ಕಲಬುರ್ಗಿ ಮತ್ತು ಹೈದರಾಬಾದ್ ಆಸ್ಪತ್ರೆಯಲ್ಲಿ ಇದ್ದರು. ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದು, ನಿತ್ಯ ವ್ಯವಹಾರಗಳ ಕುರಿತು ಪರಿಶೀಲನೆ ನಡೆಸುವಾಗ ಕಚೇರಿಯ ಬ್ಯಾಂಕ್ ಖಾತೆಯಿಂದ 75 ಲಕ್ಷ ರೂ.ಗೂ ಅಧಿಕ ಮೊತ್ತದ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂತು.
ತಕ್ಷಣವೇ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಣೆ ನಡೆಸಿದಾಗ, ಕಚೇರಿ ಖಾತೆಯಿಂದ ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಎನ್ನುವ ಖಾತೆದಾರರಿಗೆ ಜೂನ್ 1ರಂದು ಸಂದಾಯವಾಗಿದೆ. ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಯಾರೆಂಬುದು ಪರಿಶೀಲಿಸಿದಾಗ ರಾಜು ಕಟ್ಟಿಮನಿ ಎಂಬುವವರ ಪತ್ನಿ ಲಕ್ಷ್ಮಿ ಹೆಸರಲ್ಲಿದೆ. ಇವರು ಹುಣಸಗಿ ತಾಲೂಕಿನ ವಜ್ದಲ ಗ್ರಾಮದ ಮಹಿಳೆಯ ಹೆಸರಲ್ಲಿರುವುದು ತಿಳಿದು ಬಂದಿದೆ. ತಹಶೀಲ್ದಾರ್ ನಿಂಗಣ್ಣ ಬಿರಾದರ್ ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.