ಯಾದಗಿರಿ: ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶಾಸಕ ರಾಜುಗೌಡ ಅವರಿಗೆ ಇಂದು ನಿಗಮ ಮಂಡಳಿ ಭಾಗ್ಯ ಲಭಿಸಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಶಾಸಕ ರಾಜುಗೌಡ ಅಧಿಕಾರ ಸ್ವೀಕರಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಶಾಸಕರಾದ ರಾಜುಗೌಡರು ಬಿಎಸ್ವೈ ನೇತೃತ್ವದ ಸರ್ಕಾರದಲ್ಲಿ ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಅನಿವಾರ್ಯ ಕಾರಣಗಳಿಂದ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಶಾಸಕ ರಾಜುಗೌಡ ಅವರಿಗೆ ನಿಗಮ ಮಂಡಳಿ ಭಾಗ್ಯ ಒಲಿದು ಬಂದಿದೆ.
ಅಧ್ಯಕ್ಷ ಸ್ಥಾನ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನದ ಬಗ್ಗೆ ಯಾವುದೇ ಅಸಮಾಧಾನವಿಲ್ಲ, ಜಿಲ್ಲೆಯಲ್ಲಿ ಕೋವಿಡ್ ಹಾಗೂ ಪ್ರವಾಹ ಹಿನ್ನೆಲೆ ಅಧಿಕಾರ ಸ್ವೀಕರಿಸಲು ವಿಳಂಬವಾಗಿದೆ ಎಂದರು. ಬಿ.ಎಸ್. ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ನಿಗಮ ಮಂಡಳಿ ಸ್ಥಾನ ನೀಡಿದ್ದಾರೆ. ನಾನು ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ನನ್ನ ಕೆಲಸ ಕಾರ್ಯಗಳನ್ನ ನೋಡಿ ಮುಂದಿನ ದಿನಗಳಲ್ಲಿ ನನಗೆ ಸಚಿವ ಸ್ಥಾನ ನೀಡಬಹುದು ಎಂಬ ಆಶಾಭಾವವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಡಿನ ಸೇವೆ ಮಾಡಲು ಈ ಜವಾಬ್ದಾರಿ ನೀಡಿದ್ದು ನನಗೆ ಖುಷಿ ತಂದಿದೆ ಎಂದರು.