ಗುರುಮಠಕಲ್: ಗ್ರಾಮಗಳಲ್ಲಿ ಜನರು ಇಂದಿಗೂ ಕೂಡ ಕೋವಿಡ್ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೋವಿಡ್-19ರ ಕುರಿತು ಜಾಗೃತಿ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಹಾಸಿಗೆಗಳ ಕೋವಿಡ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಗ್ರಾಮಗಳಲ್ಲಿ ಎರಡನೇ ಅಲೆಯನ್ನು ಹಗುರವಾಗಿ ತೆಗೆದುಕೊಂಡು ಗ್ರಾಮಗಳ ದೇವಸ್ಥಾನದ ಕಟ್ಟೆಗಳ ಮೇಲೆ ಗುಂಪಾಗಿ ಕೂಡುವ ವಾಡಿಕೆಯನ್ನು ಮುಂದುವರೆಸಿದ್ದು, ಅದನ್ನು ಬದಲಿಸಿ ಕೋವಿಡ್ ವಿರುದ್ಧ ಹೋರಾಡುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದರು.
ಜನರು ಜಾಗೃತಿ ಇಲ್ಲದೇ ಗ್ರಾಮೀಣ ಭಾಗದಲ್ಲಿ ಸಾವುಗಳು ಹೆಚ್ಚಾಗುತ್ತಿವೆ. ಅದರ ಅರಿವಿಲ್ಲದೇ ಜನರು ತಿರುಗಾಡುತ್ತಿದ್ದಾರೆ. ಜನರಿಗೆ ತೊಂದರೆ ಆಗಬಾರದೆಂದು ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಆಕ್ಸಿಜನ್ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿದೆ. ಜನರು ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ದೇಶಾದ್ಯಂತ ಕೋವಿಡ್ ವ್ಯಾಕ್ಸಿನ್ ಸಮಸ್ಯೆ ಆಗಿದೆ. ಇನ್ನು ಮುಂದೆ ಅದು ನಿವಾರಣೆ ಆಗಲಿದೆ. ಜಿಲ್ಲೆಗೆ ನೀಡಿದ ಕೋವಿಡ್-19 ಪರೀಕ್ಷೆಯ ಗುರಿಗಿಂತಲು ಹೆಚ್ಚಾಗಿ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಹೊರ ರಾಜ್ಯಗಳಿಂದ ಗ್ರಾಮಗಳಿಗೆ ಬಂದಿರುವ ಜನರನ್ನು ಗುರುತಿಸಿ ಕೊವಿಡ್ ಪರೀಕ್ಷೆಗೆ ಒಳಪಡಿಸಲು ಗ್ರಾಮ ಪಂಚಾಯಿತಿ ಹಂತದಲ್ಲಿ ಪಟ್ಟಿ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಣ ಅಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.