ಯಾದಗಿರಿ: ಕೋವಿಡ್ ಸೋಂಕಿತರ ನರಳಾಟ ಸುಳ್ಳು, ರಾಜ್ಯದಲ್ಲಿ ಆಕ್ಸಿಜನ್ ಮತ್ತು ಇಂಜೆಕ್ಷನ್ ಕೊರತೆ ಇಲ್ಲ, ಬೀದರ್ ಪ್ರಕರಣಗಳು ಸಹ ಸುಳ್ಳು, ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ಸಚಿವ ಪ್ರಭು ಚವ್ಹಾಣ ಯಾದಗಿರಿಯಲ್ಲಿಂದು ಹೇಳಿಕೆ ನೀಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಕೋವಿಡ್ -19 ನಿಯಂತ್ರಣ ಕುರಿತು ಸಭೆ ನಡೆಸಿದ ಸಚಿವ ಪ್ರಭು ಚವ್ಹಾಣ, ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ರಾಜ್ಯ ಸರ್ಕಾರದ ವಿಫಲತೆ ಸುದ್ದಿಗಳು ಸುಳ್ಳು, ಕಾಂಗ್ರೆಸ್ ಏನು ಅಂತಾ ರಾಜ್ಯದ ಜನರಿಗೆ ಗೊತ್ತಿದೆ. ಅವರು ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತು ಏನು ಬೇಕಾದರೂ ಮಾತನಾಡುತ್ತಾರೆ. ಅವರದ್ದು ಮಾತನಾಡುವ ಕೆಲಸ ಅವರು ಮಾತನಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಅಂತ ತಮ್ಮ ಬೆನ್ನು ತಾವೇ ತಟ್ಟಿಕೊಂಡರು.
ಇನ್ನು ಸಚಿವ ಪ್ರಭು ಚವ್ಹಾಣ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಸಹ ನಡೆಯಿತು. ಸಭೆ ಬಳಿಕ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಜಿ.ಪಂ ಸಭಾಂಗಣದಲ್ಲಿ ಕೋವಿಡ್ ಸಭೆ ಮುಕ್ತಾಯವಾದ ಬಳಿಕ ಸಚಿವ ಪ್ರಭು ಚವ್ಹಾಣ ಅವರನ್ನು ಜನ ಸುತ್ತುವರಿದ ಪರಿಣಾಮ,ಜನರ ಗುಂಪಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಸಚಿವರು ಸಂವಹನ ನಡೆಸಿದರು. ಸಚಿವರ ಜೊತೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ಅಮರೇಶ ನಾಯಕ ಸಹ ಇದ್ರು.