ಸುರಪುರ: ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ನೀರಾವರಿ ಸಮಸ್ಯೆಗಳಿವೆ. ಅವುಗಳನ್ನು ಕೂಡಲೇ ಪರಿಹರಿಸುವಂತೆ ಹಾಗೂ ಎಸ್‌ಸಿಪಿ, ಟಿಎಸ್‌ಪಿಗೆ ಹೆಚ್ಚಿನ ಅನುದಾನ ನೀಡಿ, ಪರಿಶಿಷ್ಟರ ಅಭಿವೃದ್ಧಿಗೆ ಒತ್ತು ನೀಡುವಂತೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ನೀಡಲಾಯಿತು.
ತಾಲೂಕಿನ ನಾರಾಯಣಪುರ ಜಲಾಶಯಕ್ಕೆ ಭೇಟಿ ನೀಡಿದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಸದಸ್ಯರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಭೀಮರಾಯನ ಗುಡಿ ಮತ್ತು ನಾರಾಯಣಪುರ ಕಾಡಾ ಕಚೇರಿಗಳ ಮುಖ್ಯ ಅಭಿಯಂತರರನ್ನು ಕರೆದು ಎಸ್‌ಸಿಪಿ, ಟಿಎಸ್‌ಪಿಯ ಈ ಹಿಂದಿನ ಅನುದಾನ ಹಾಗೂ ಕಾಮಗಾರಿಗಳ ಮಾಹಿತಿ ಪಡೆಯುತ್ತೇನೆ ಎಂದರು. ಅಲ್ಲದೆ ಶೋಷಿತರ ಪರ ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಶಾಸಕರಾದ ರಾಜುಗೌಡ ದೇವದುರ್ಗ, ಶಿವನಗೌಡ ನಾಯಕ್, ಡಾ. ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ ಮಾನಪ್ಪ ವಜ್ಜಲ್ ಮುಖಂಡರಾದ ಬಸನಗೌಡ ಅಳ್ಳಿಕೋಟಿ, ಮಾನಪ್ಪ ನಾಯಕ್, ಗೋಪಾಲ ಬಾಗಲಕೋಟೆ ಇದ್ದರು.