ಸುರಪುರ: ತಾಲೂಕಿನ ಬೇವಿನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕಾದ ಎಣ್ಣೆಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ.
ಜನವರಿ 11ರಂದು ಬೇವಿನಾಳ ಗ್ರಾಮದ ಮರೆಪ್ಪ ಶೆಳ್ಳಿಗೆಪ್ಪ ಎಂಬುವ ವ್ಯಕ್ತಿಯನ್ನು ಅದೇ ಗ್ರಾಮದ ಕೆಲ ದುಷ್ಕರ್ಮಿಗಳು ಹೊಲಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಕಾದ ಎಣ್ಣೆಗೆ ಎಸೆದಿದ್ದರು. ಇದರಿಂದ ಮರೆಪ್ಪ ಶೆಳ್ಳಿಗೆಪ್ಪಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಗುರುವಾರ ಸಂಜೆ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಗ್ರಾಮದ ಪ್ರಭಾವಿ ವ್ಯಕ್ತಿಗಳು ರಾಜಕೀಯ ವೈಷಮ್ಯದಿಂದಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಮೃತ ಮರಿಯಪ್ಪನ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದರು. ಆದರೂ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಘಟನೆಗೆ ಕಾರಣರಾದವರನ್ನು ಬಂಧಿಸುವವರೆಗೂ ಶವಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
ಓದಿ: ಕಾದ ಎಣ್ಣೆಗೆ ವ್ಯಕ್ತಿಯನ್ನು ಎಸೆದ ಕಿಡಿಗೇಡಿಗಳು
ಸುರಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಂ.ಪಾಟೀಲ್ ನಾಲ್ಕು ದಿನಗಳ ಕಾಲಾವಕಾಶ ಪಡೆದು ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದು, ನಂತರ ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ.