ಸುರಪುರ (ಯಾದಗಿರಿ): ತಾಲೂಕು ಮಾದಿಗ ಯುವ ಸೇನೆಯಿಂದ ನಗರದ ತಹಶೀಲ್ದಾರ್ ಕಚೇರಿ ಮುಂದೆ ದೇಶದಲ್ಲಿನ ದಲಿತರ ಮೇಲಿನ ಹಲ್ಲೆ ಹಾಗೂ ಅಂಬೇಡ್ಕರ್ ಮನೆ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಯುವ ಸೇನೆ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜ ಮುಷ್ಠಳ್ಳಿ ಮಾತನಾಡಿ, ದೇಶದಲ್ಲಿ ದಿನನಿತ್ಯವೂ ಕೂಡ ದಲಿತರ ಮೇಲೆ ಹಲ್ಲೆಗಳು, ಕೊಲೆಗಳು ನಡೆಯುತ್ತಿವೆ. ಅಲ್ಲದೆ ಡಾ. ಬಿ ಆರ್ ಅಂಬೇಡ್ಕರ್ ಅವರು ಬದುಕಿದ ಮುಂಬೈನ ದಾದರ್ನಲ್ಲಿರುವ ಮನೆಯ ಮೇಲೆ ದಾಳಿ ಮಾಡಿರುವ ಕೋಮುವಾದಿಗಳು, ಮನೆಯ ಕಿಟಕಿ-ಗಾಜುಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಮನೆಯ ಹಿಂಬದಿಯ ಗ್ರಂಥಾಲಯವನ್ನು ಕೂಡ ಧ್ವಂಸಗೊಳಿಸಿದ್ದಾರೆ.
ಇದಕ್ಕೆ ಕಾರಣರಾಗಿರುವ ದೇಶದ್ರೋಹಿಗಳನ್ನು ಬಂಧಿಸದೆ ಸರ್ಕಾರ ನಿದ್ದೆ ಮಾಡುತ್ತಿದೆ. ಅಂಬೇಡ್ಕರರನ್ನು ಅವಮಾನಿಸಿದ್ರೆ ಅದು ದೇಶಕ್ಕೆ ಅಪಮಾನಿಸಿದಂತಾಗಲಿದೆ. ಆದ್ದರಿಂದ ಅಂಬೇಡ್ಕರ್ ರಾಜಗೃಹದ ಮೇಲೆ ದಾಳಿ ಮಾಡಿದವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ನಂತರ ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಹುಲಗಪ್ಪ ಶೆಳ್ಳಿಗಿ, ಬಸವರಾಜ ಸುಗೂರ, ಶಿವಲಿಂಗಪ್ಪ ಮಾಲಗತ್ತಿ, ಮಲ್ಲಿಕಾರ್ಜುನ ಮುಷ್ಠಹಳ್ಳಿ, ಮಹೇಶ್ ಜಾಲಿಬೆಂಚಿ, ಬಸವರಾಜ ವಾಗಣಗೇರಾ ಇತರರಿದ್ದರು.