ಯಾದಗಿರಿ: ಲಾಕ್ಡೌನ್ ನಿಂದಾಗಿ ಅನೇಕ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಇದು ಅನೇಕ ಬಡ ಕಾರ್ಮಿಕರ ಅನ್ನಕ್ಕೆ ಕನ್ನ ಹಾಕಿದೆ. ಬಣ್ಣ ಹಚ್ಚಿಕೊಂಡು ಜನರನ್ನು ರಂಜಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಯಾದಗಿಯರ ಬೀದಿ ನಾಟಕ ಕಲಾವಿದರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.
ಯಾದಗಿರಿ ನಗರದ ಸಿಎನ್ ಬಡಾವಣೆಯ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವ ಈ ಹಗಲು ವೇಶ ಕಲಾವಿದರು, ನಿತ್ಯ ಒಂದೊಂದು ದಿನ ಒಂದೊಂದು ಪೌರಾಣಿಕ, ಸಾಮಾಜಿಕ, ಸಂಸಾರಿಕ ನಾಟಕಗಳ ವೇಷ ಭೂಷಣ ತೊಟ್ಟು ಮುಖಕ್ಕೆ ಬಣ್ಣ ಬಳಿದುಕೊಂಡು ನಾಟಕವಾಡಿ ಬಂದ ಆದಾಯದಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಬಡ ಕಲಾವಿದರು, ಇದೀಗ ಲಾಕ್ಡೌನ್ ನಿಂದಾಗಿ ಹಸಿನಿಂದ ಬಳಲುವಂತಾಗಿದೆ.
ಲಾಕ್ಡೌನ್ ಆದಾಗಿನಿಂದ ನಾಟಕಗಳಿಗೆ ಬ್ರೇಕ್ ಬಿದ್ದಿದೆ. ನಾಟಕದಿಂದ ಬರುವ ಆದಾಯದಿಂದ ಜೀವನ ಸಾಗಿಸುವ ಇವರು ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ. ಮಕ್ಕಳು ಮರಿಗಳನ್ನಿಟ್ಟುಕೊಂಡು, ಕೈಯಲ್ಲಿ ಕೆಲಸ ಇಲ್ಲದೆ ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ದಾರೆ.
ಕಲೆಯನ್ನು ನಂಬಿಕೊಂಡು ಬೀದಿ ನಾಟಕ ಆಡಿ ಜನರಿಗೆ ಮನರಂಜಿಸುತ್ತ ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಈ ಕಲಾವಿದರ ಬದುಕು ಇದೀಗ ಶೋಚನಿಯವಾಗಿದೆ. ಎಲ್ಲರಿಗೂ ನೀಡಿದಂತೆ ಈ ಬಡ ಕಲಾವಿದರಿಗೂ ದಾನಿಗಳು ಹಾಗೂ ಸರ್ಕಾರ ಅಲ್ಪ ಪ್ರಮಾಣದ ದಿನಸಿಯನ್ನು ನೀಡಿದೆ. ಆದರೆ ಕೊಟ್ಟಿರುವ ಆಹಾರ ಧಾನ್ಯಗಳು ಖಾಲಿಯಾಗಿ ಇದೀಗ ಮತ್ತೆ ಊಟಕ್ಕಾಗಿ ಬೇರೆಯವರ ಬಳಿ ಕೈ ಚಾಚುವಂತಾಗಿದೆ. ಪುಟ್ಟ ಪುಟ್ಟ ಮಕ್ಕಳನ್ನು ಹೊಂದಿರುವ ಇವರು ಮಕ್ಕಳಿಗೆ ಚಾಕೊಲೆಟ್ ,ಬಿಸ್ಕತ್ ಕೊಡಿಸಲಾಗದ ಹೀನಾಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಕಲೆಯ ಆದಾಯವನ್ನೇ ನಂಬಿಕೊಂಡಿರುವ ಸುಮಾರು 20ಕ್ಕೂ ಹೆಚ್ಚು ಕಲಾವಿದರ ಈ ಕುಟುಂಬಗಳು ಕೊರೊನಾ ಲಾಕ್ ಡೌನ್ ನಿಂದ ತುತ್ತು ಅನ್ನಕ್ಕೂ ನಿತ್ಯ ಹೋರಾಟ ನಡೆಸಿವೆ. ಲಾಕ್ಡೌನ್ ನಿಂದ ಬರ್ಬಾದ್ ಆಗಿ ಹಳಿ ತಪ್ಪಿರುವ ಇವರ ಬುದುಕಿನ ಬಂಡಿ ಸಾಗಿಸಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.