ಯಾದಗಿರಿ ( ಗುರುಮಠಕಲ್): ಮೀನು ಹಿಡಿಯಲು ಕೆರೆಗೆ ತೆರಳಿದ್ದ ಮೂವರ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ಚಿರತೆ ಬಾಯಿಂದ ಮೂವರು ಪಾರಾಗಿ ಬದುಕುಳಿದಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮೀನಾಸಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಘಟನೆಯಿಂದ ಸುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮೀನಾಸಪುರ ಗ್ರಾಮದ ಕೆರೆಯ ಪಕ್ಕದಲ್ಲಿ ನಸುಕಿನ ಜಾವ ಈ ಘಟನೆ ನಡೆದಿದೆ. ಮೀನಾಸಪುರ ಗ್ರಾಮದ ಮೀನುಗಾರರಾದ ಚಂದ್ರಪ್ಪ, ರಾಜಪ್ಪ ಹಾಗೂ ಹನಮಂತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ನೀರು ಕುಡಿಯಲು ಬಂದಿದ್ದ ಚಿರತೆ ಮೊದಲಿಗೆ ಚಂದ್ರಪ್ಪನ ಮೇಲೆ ದಾಳಿ ಮಾಡಿದೆ. ಚಂದ್ರಪ್ಪ ಚಿರತೆಯ ಬಾಯಿಂದ ತಪ್ಪಿಸಿಕೊಂಡಿದ್ದಾನೆ. ಇದಾದ ಬಳಿಕ ರಾಜಪ್ಪ ಹಾಗೂ ಹನಮಂತನ ಮೇಲೆ ದಾಳಿ ಮಾಡಿದೆ. ಆದರೆ ಮೂವರು ಚಿರತೆಯನ್ನು ಓಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಚಿರತೆಯನ್ನು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರು ಈ ಬಗ್ಗೆ ಎಚ್ಚರ ವಹಿಸಬೇಕೆಂದು ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ಭಾವಿಕಟ್ಟಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ಪ್ರಥಮ ಪಕ್ಷಿ ಗಣತಿ... 6 ಹೊಸ ಜಾತಿಯ ಹಕ್ಕಿಗಳು ಪತ್ತೆ