ಯಾದಗಿರಿ: ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವನಗೌಡ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಜಿಲ್ಲೆಯ ಮುಂಡರಗಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೀರೆ, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಒಳಗೊಂಡ ಕಿಟ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ಶಿವನಗೌಡ ಮಾತನಾಡಿ, ಇದೊಂದು ಪವಿತ್ರವಾದ ಕೆಲಸವಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಕಿಟ್ ಉಪಯೋಗ ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸೇವಾ ಮನೋಭಾವನೆಯ ಜೊತೆಗೆ ಕಾರ್ಯನಿರ್ವಹಿಸಬೇಕು. ಸಂಶಯವಿರುವ ಅಥವಾ ರೋಗ ಲಕ್ಷಣ ಇರುವ ವ್ಯಕ್ತಿಗಳ ಬಗ್ಗೆ ಸಮೀಪದ ಆಸ್ಪತ್ರೆಗಳಿಗೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಅಸಿಸ್ಟೆಂಟ್ ಡ್ರಗ್ಸ್ ಕಂಟ್ರೋಲರ್ ಪುಷ್ಪಪ್ರಿಯಾ ಎನ್., ಡಾ. ಪ್ರಕಾಶ್ ಹೆಚ್.ರಾಜಾಪೂರ, ಡಾ. ರಮೇಶ್ ಸಜ್ಜನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ. ಮಣ್ಣೂರು, ನಾಗರಾಜ ಕೆಂಭಾವಿ, ಸಂಗಮೇಶ್ ಕೆಂಭಾವಿ ಹಾಗೂ ಇತರರು ಉಪಸ್ಥಿತರಿದ್ದರು.