ಯಾದಗಿರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎರಡು ಢಾಬಾಗಳು ಹಾಗೂ ಒಂದು ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಚಂದು ಪವಾರ್, ರವಿ ರಾಠೋಡ್ ಮತ್ತು ಮಹೇಶ್ ಕಲಾಲ್ ಬಂಧಿತರು. ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಸದಾಶಿವ ಎಸ್ ನೇತೃತ್ವದಲ್ಲಿ ಮೂರು ಕಡೆ ದಾಳಿ ನಡೆಸಿದ ಅಧಿಕಾರಿಗಳು, 50 ಸಾವಿರಕ್ಕೂ ಅಧಿಕ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಬಳಿ ಇರುವ ಆರ್ಎಂಎಸ್ ಢಾಬಾ, ಕಂಕರಮಷಿನ್ ತಾಂಡಾದ ಬಳಿ ಇರುವ ಮತ್ತೊಂದು ದಾಬಾ ಹಾಗೂ ಮಧ್ವರ ಗ್ರಾಮದ ಅಂಗಡಿಯೊಂದರಲ್ಲಿ, ಅಕ್ರಮ ಮದ್ಯ ಮಾರಾಟದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಅಕ್ರಮ ಸರಕನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.