ಗುರುಮಠಕಲ್: ತಾಲೂಕಿನ ನಜಾರಪೂರ ಗ್ರಾಮದ ಬಳಿ ಇರುವ ದಬದಭಿ ಜಲಪಾತ ತಾಣವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸಣ್ಣಗೌಡ ಯಾಡಿಯಪೂರ್ ಅವರು ಹೇಳಿದರು.
ತಾಲೂಕಿನ ನಜಾರಪೂರ ಗ್ರಾಮದಲ್ಲಿರುವ ದಭದಭಿ ಪ್ರವಾಸ ತಾಣಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾತನಾಡಿದ ಅವರು, ಇಲ್ಲಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅಂದಾಜು 6 ಕೋಟಿ ರೂ. ಅನುದಾನ ಬೇಕಾಗುತ್ತದೆ. ಈ ವಿಚಾರದ ಚರ್ಚೆಗಾಗಿ ಜ.4 ರಂದು ಜಿಲ್ಲಾ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಯಲಿದ್ದು ಜಿಲ್ಲಾಧಿಕಾರಿ, ಕ್ಷೇತ್ರದ ಶಾಸಕರು ಮತ್ತು ಸಂಸದರ ಗಮನಕ್ಕೆ ತಂದು ಚರ್ಚಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ 1.47 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅದರ ಜೊತೆಗೆ ಇನ್ನಷ್ಟು ಅನುದಾನ ಅನುಮೋದನೆಗೊಳಿಸಿ ದಬದಭಿಯನ್ನು ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಕೆಇಬಿ ಮತ್ತು ಪಿಡಬ್ಲ್ಯೂಡಿ ಮುಂತಾದ ಇಲಾಖೆಯವರ ಸಹಾಯ ಪಡೆಯುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ರಾಜಶ್ರೀ ರಘುನಾಥರೆಡ್ಡಿ ನಜಾರಪೂರ್, ಆರೋಗ್ಯ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮರದೀಪ್, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ ಪುಟುಗಿ, ಮಾಜಿ ಎಪಿಎಂಸಿ ಅಧ್ಯಕ್ಷ ಭೀಮಣಗೌಡ ಕ್ಯಾತನಾಳ್, ಯಾದಗಿರಿಯ ಡಿಎಫ್‌ಓ ಎಂ.ಎಲ್. ಭಾವಿಕಟ್ಟಿ, ನರಸರೆಡ್ಡಿ ಗಡ್ಡೆಸೂಗೂರ್, ಮಲ್ಲಿಕಾರ್ಜುನ ಅಡಕಿ, ಶರಣು ಸೇರಿದಂತೆ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.