ಯಾದಗಿರಿ: ನೆರೆ ರಾಜ್ಯ ತೆಲಂಗಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಯಾದಗಿರಿ ಜಿಲ್ಲೆಯಲ್ಲೂ ಕೂಡ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಪ್ರತಿನಿತ್ಯ ನೂರಾರು ಜನ ರೈಲು ಹಾಗೂ ಬಸ್ ಮೂಲಕ ಹೈದ್ರಾಬಾದ್ಗೆ ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತಿದ್ದು, ತೆಲಂಗಾಣದಿಂದ ಜಿಲ್ಲೆಗೆ ಆಗಮಿಸುವ ಜನರಿಂದ ಕೊರೊನಾ ವೈರಸ್ ಭೀತಿ ಎದುರಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್ಗಳ ವಿಶೇಷ ವಾರ್ಡ್ ತೆಗೆಯಲಾಗಿದ್ದು, ಶಂಕಿತ ರೋಗಿ ಪತ್ತೆಯಾದಲ್ಲಿ ಚಿಕಿತ್ಸೆಗಾಗಿ ವಿಶೇಷ ವೈದ್ಯರು ಮತ್ತು ಸ್ಟಾಪ್ ನರ್ಸ್ಗಳನ್ನು ನೇಮಕ ಮಾಡಲಾಗಿದೆ. ಅಲ್ಲದೆ ನುರಿತ ವೈದ್ಯರಿಂದ ಕಾರ್ಯಾಗಾರ ನಡೆಸಿ ಕೊರೊನಾ ಸೋಂಕಿನ ಚಿಕಿತ್ಸೆ ಕುರಿತು ಜಿಲ್ಲೆಯ ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ನಾರಾಯಣಪ್ಪ ಹೇಳಿದರು.
ಮಹಾಮಾರಿ ಕೊರೊನಾ ವೈರಸ್ ಕುರಿತು ನಗರ ಸೇರಿದಂತೆ ತಾಲೂಕಾ ಕೇಂದ್ರ ಮತ್ತು ಹಳ್ಳಿಗಳಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ವತಿಯಿಂದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ನಾರಯಾಣಪ್ಪ ಮಾಹಿತಿ ನೀಡಿದ್ದಾರೆ.