ಸುರಪುರ : ತಾಲೂಕಿನ ಎಲ್ಲಾ ಕಚೇರಿಗಳಲ್ಲಿನ ಚಟುವಟಿಕೆಗಳು ಚುರುಕುಗೊಳಿಸಿ ರೈತರ ವ್ಯವಸಾಯಕ್ಕೆ ಅನುಕೂಲ ಮಾಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ಜಿಲ್ಲೆ ಗ್ರೀನ್ ಝೋನ್ ಆಗಿರುವುದರಿಂದ ಎಲ್ಲ ಕಚೇರಿಗಳು ಕಾರ್ಯಾರಂಭಗೊಂಡಿವೆ. ಆದರೆ ತಮ್ಮ ಚಟುವಟಿಕೆಗಳಲ್ಲಿ ಚುರುಕುತನ ತೋರಿಸುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಮುಂಗಾರು ಆರಂಭಗೊಳ್ಳುವ ಸಂಭವವಿದ್ದು, ರೈತರಿಗೆ ಬೀಜ, ಗೊಬ್ಬರ ಮತ್ತು ಇತರೆ ಅಗತ್ಯ ವಸ್ತುಗಳು ಹಾಗೂ ಪಹಣಿ ಪತ್ರಿಕೆಗಳ ಅವಶ್ಯಕತೆ ಇದೆ.
ಅಧಿಕಾರಿಗಳು ಚುರುಕುಗೊಂಡು ರೈತರಿಗೆ ಸರಿಯಾದ ಅನುಕೂಲ ಮಾಡಿಕೊಡಲು ಆದೇಶ ಮಾಡಬೇಕೆಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವುಕುಮಾರ್ ಸಾಹುಕಾರ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ರೈತ ಸಂಘದಿಂದ ನಗರದ ತಹಸೀಲ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಸೊಫಿಯಾ ಸುಲ್ತಾನ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ, ವೆಂಕಟೇಶಗೌಡ ಕುಪ್ಪಗಲ್, ದೇವಿಂದ್ರಪ್ಪಗೌಡ ಬನಗುಂಡ ಸೇರಿದಂತೆ ಹಲವರಿದ್ದರು.