ಸುರಪುರ: ಕಾಲು ಜಾರಿ ಬಿದ್ದು ಎಪಿಎಂಸಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಬಾದ್ಯಾಪುರ ಗ್ರಾಮದಲ್ಲಿನ ಹೊಲಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಾಲೂಕಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ತಾಲೂಕಿನ ಕುರುಬ ಸಮುದಾಯದ ಹಿರಿಯ ಮುಖಂಡರಾಗಿದ್ದ ನಿಂಗಣ್ಣ, ಮೊದಲು ಶಾಸಕ ರಾಜುಗೌಡ ಅವರೊಂದಿಗೆ ರಾಜಕೀಯದಲ್ಲಿ ಏಳಿಗೆ ಕಂಡು ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಪಕ್ಷ ಬದಲಾವಣೆ ಮಾಡಿಕೊಂಡು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರೊಂದಿಗೆ ಗುರುತಿಸಿಕೊಂಡು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಸುರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದರು ಹಾಗೂ ಹಾಲಿ ಎಪಿಎಂಸಿ ಸದಸ್ಯರಾಗಿದ್ದರು.
ನಿಂಗಣ್ಣ ಬಾದ್ಯಾಪುರ ಅವರ ಅಕಾಲಿಕ ನಿಧನಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.