ಯಾದಗಿರಿ: ಕುಡಕನೊಬ್ಬನಿಗೆ ನಿವೃತ್ತ ಪಿಎಸ್ಐ ಅಧಿಕಾರಿ ಬುದ್ದಿ ಮಾತು ಹೇಳಿದಕ್ಕೆ ಆ ಕುಡುಕ ನಿವೃತ್ತ ಅಧಿಕಾರಿ ಮೇಲೆಯೇ ಬೆಲ್ಟ್ನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.
ನಗರದ ಹೊಸಳ್ಳಿ ಕ್ರಾಸ್ ಸಮೀಪ ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಮಾಣಿಕೇಶ್ವರಿ ನಗರದ ನಿವಾಸಿ ಸಂಚಾರಿ ಠಾಣೆಯ ನಿವೃತ್ತ ಪಿಎಸ್ಐ ಸುಖದೇವ ಬೆಲಿಕೇರಿ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಕುಡುಕನ ಬಗ್ಗೆ ಇನ್ನೂ ಮಾಹಿತಿ ಪತ್ತೆಯಾಗಿಲ್ಲ
ಸುಖದೇವ ಬೆಲಿಕೇರಿ ಅವರು ಮನೆಗೆ ಬೈಕ್ ಮೇಲೆ ತೆರಳಬೇಕು ಎಂದು ಹೊಸಳ್ಳಿ ಕ್ರಾಸ್ ಬಳಿ ನಿಂತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿ ಬಂದು ನಿವೃತ್ತ ಪಿಎಸ್ಐ ಬಳಿ ಬೈಕ್ ಲಿಫ್ಟ್ ಕೇಳಿದ್ದಾನೆ. ಈ ವೇಳೆ, ನಡೆದುಕೊಂಡು ಹೋಗು ಎಂದು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಪಿಎಸ್ಐ ಬುದ್ದಿ ಮಾತು ಹೇಳಿದ್ದಾರೆ.
ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಕುಡುಕ ಬೆಲ್ಟ್ನಿಂದ ಸುಖದೇವ ಅವರ ಕಣ್ಣು ಹಾಗೂ ತಲೆಯ ಭಾಗಕ್ಕೆ ಹೊಡೆದು ಹಲ್ಲೆ ನಡೆಸುವುದರ ಜೊತೆ ಅಲ್ಲಿದ್ದ ಇನ್ನಿಬ್ಬರ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾದ ಸುಖದೇವ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಕುಡುಕನ ಅವಾಂತರದಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.