ಯಾದಗಿರಿ: ನಗರದ ಹಳೆಯ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಚಿಕಿತ್ಸಾಲಯ, ಹೆರಿಗೆ ಕೋಣೆ, ಮಕ್ಕಳ ಪೌಷ್ಠಿಕಾಂಶ ಮತ್ತು ಪುನಶ್ಚೇತನ ವಿಭಾಗ, ಟುಬೆಕ್ಟೊಮಿ ವಾರ್ಡ್, ಮಕ್ಕಳ ತೀವೃ ನಿಗಾ ಘಟಕ ಹಾಗೂ ರಕ್ತ ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಆಸ್ಪತ್ರೆಯ ಮುಂಭಾಗದ ಆವರಣದಲ್ಲಿ ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆಗೆ ಸೇರಿದ ಹಳೆಯ ನಿರುಪಯುಕ್ತ ವಾಹನಗಳನ್ನು ಸರ್ಕಾರದ ನಿಯಮಾವಳಿಯ ಪ್ರಕಾರ ಹರಾಜು ಪ್ರಕ್ರಿಯೆಯ ಮೂಲಕ ವಿಲೇವಾರಿ ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಅಧಿಕಾರಿಗಳಿಗೆ ತಿಳಿಸಿದರು. ಆಸ್ಪತ್ರೆಯ ಸಣ್ಣ ಪುಟ್ಟ ರಿಪೇರಿ ಕಾರ್ಯ ಮಾಡಿಸುವಂತೆ ಹಾಗೂ ಕುಡಿಯುವ ನೀರಿನ ಸೌಕರ್ಯವನ್ನು ಸಮರ್ಪಕವಾಗಿ ಒದಗಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಂಚಾರಿ ಜ್ವರ ತಪಾಸಣಾ ವಾಹನ: ಜಿಲ್ಲೆಯಲ್ಲಿ ಕೋವಿಡ್-19 ಮಹಾಮಾರಿ ರೋಗವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೋವಿಡ್-19 ರೋಗವನ್ನು ತಡೆಗಟ್ಟುವುದಕ್ಕಾಗಿ ಜಿಲ್ಲೆಯಲ್ಲಿ 15 ಸಂಚಾರಿ ಜ್ವರ ತಪಾಸಣಾ ವಾಹನ ಹಾಗೂ ಗಂಟಲು ದ್ರವ ಮಾದರಿ ಸಂಗ್ರಹ ತಂಡಗಳನ್ನು ರಚಿಸಲಾಗಿದೆ ಎಂದರು.
ಯಾದಗಿರಿ ತಾಲೂಕು 6, ಶಹಾಪೂರ ತಾಲೂಕು 4 ಹಾಗೂ ಸುರಪೂರ ತಾಲೂಕು 5 ಸೇರಿ ಒಟ್ಟು 15 ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಇವುಗಳ ಲಾಭ ಪಡೆಯಬೇಕು ಎಂದರು. ಪ್ರತಿ ತಂಡದಲ್ಲಿ ಒಬ್ಬರು ಲ್ಯಾಬ್ ಟೆಕ್ನಿಷನ್, ಒಬ್ಬರು ಡಾಟಾ ಎಂಟ್ರಿ ಆಪರೇಟರ್ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹೆಚ್ಚುವರಿ 15 ತಂಡಗಳು ಆಯಾ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಸಾರ್ವಜನಿಕರು ಕೋವಿಡ್-19 ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿರುವವರು, ದುರ್ಬಲ ವರ್ಗದವರು ಮತ್ತು ರೋಗ ಲಕ್ಷಣಗಳು ಕಂಡು ಬಂದವರು, ಧಾರಕ ವಲಯದಲ್ಲಿರುವವರು ತಮ್ಮ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಇದರಿಂದ ರೋಗವನ್ನು ಮೊದಲ ಹಂತದಲ್ಲಿ ಪತ್ತೆಹಚ್ಚಲು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ರೋಗವು ಹರಡದಂತೆ ತಡೆಗಟ್ಟಲು ಸಹಾಕಾರಿಯಾಗುತ್ತದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಾದಗಿರಿ ತಾಲೂಕ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಭಗವಂತ ಅನವಾರ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ನಾರಾಯಣಪ್ಪ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.