ಯಾದಗಿರಿ: ಡೇಟಾ ಆಪರೇಟರ್ ತಪ್ಪಿನಿಂದ ಮೃತ ವ್ಯಕ್ತಿಯ ಕೋವಿಡ್ ವರದಿಯಲ್ಲಾದ ಎಡವಟ್ಟಿನಿಂದ ಇಡೀ ಕುಟುಂಬಕ್ಕೆ ಆತಂಕವನ್ನುಂಟು ಮಾಡಿದ ಘಟನೆ ಜಿಲ್ಲೆಯ ಶಹಪುರ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ನಡೆದಿದೆ.
ರಸ್ತಾಪುರ ಗ್ರಾಮದ ಹಣಮಂತ ಎಂಬುವ ವೃದ್ಧ ಅನಾರೋಗ್ಯದಿಂದ ಬಳಲುತ್ತಿರುವಾಗ ಕುಟುಂಬಸ್ಥರು ಏಪ್ರಿಲ್ 18ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಹಣಮಂತ ಅವರನ್ನ ಕೋವಿಡ್ ಟೆಸ್ಟ್ಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿತ್ತು. ನಂತರ ಒಂದು ದಿನದ ಬಳಿಕ ಹಣಮಂತ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದ.
ಏಪ್ರಿಲ್ 20ರಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿ ಹಣಮಂತನ ಅಂತ್ಯ ಸಂಸ್ಕಾರ ಮಾಡಿದ್ದರು. ಸಾವನ್ನಪ್ಪಿದ ಹಣಮಂತನ ಸ್ವ್ಯಾಬ್ ಕಲೆಕ್ಟ್ ಮಾಡಿದ ಆರೋಗ್ಯ ಇಲಾಖೆ ನಂತರ ಅವರಿಗೆ ಪಾಸಿಟಿವ್ ಇದೆ ಅಂತ ಕುಟುಂಬಸ್ಥರಿಗೆ ತಿಳಿಸಿದ್ದು, ಕುಟುಂಬಸ್ಥರು ಸೇರಿದಂತೆ ಹಣಮಂತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡುವಂತೆ ಮಾಡಿದ್ದರು.
ನೆಗೆಟಿವ್ ವರದಿ ಇದ್ದರೂ ಕೂಡ ಡೇಟಾ ಆಪರೇಟರ್ ಎಡವಟ್ಟಿನಿಂದ ಪಾಸಿಟಿವ್ ವರದಿ ಅಂತ ತಿಳಿಸಿದ ವೈದ್ಯರು ನಂತರ ಮತ್ತೆ ನೆಗೆಟಿವ್ ವರದಿ ಬಂದಿದೆ ಅಂತ ತಿಳಿಸುವ ಮೂಲಕ ಆರೋಗ್ಯ ಇಲಾಖೆ ಮಾಡಿದ ತಪ್ಪಿನಿಂದ ಈಗ ಇಡೀ ರಸ್ತಾಪುರ ಗ್ರಾಮಸ್ಥರು ಗೊಂದಲಕ್ಕೆ ಸಿಲುಕಿದ್ದಾರೆ.
ಮೃತ ಹಣಮಂತನ ಕೋವಿಡ್ ಟೆಸ್ಟ್ಗೆ ಮೂರು ಬಾರಿ ಬೇರೆ ಬೇರೆ ವರದಿ ನೀಡುವ ಮೂಲಕ ಆರೋಗ್ಯ ಇಲಾಖೆಯ ತಪ್ಪಿನಿಂದಾಗಿ ಇಡೀ ಗ್ರಾಮ ಈಗ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.