ಸುರಪುರ : ಶಹಾಪುರ ತಾಲೂಕಿನ ಗೋಗಿ ತಾಂಡಾದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ನಡುವೆ ಗಲಾಟೆಯಾಗಿ, ಒಬ್ಬನ ಕೊಲೆಯಲ್ಲಿ ಗಲಾಟೆ ಅಂತ್ಯಗೊಂಡ ಘಟನೆ ನಡೆದಿದೆ.
ಗೋಗಿ ತಾಂಡಾದ ಕೇಮು ನಾಯಕ ಎಂಬ ವ್ಯಕ್ತಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ, ಇದೇ ತಾಂಡಾದ ನರಸಿಂಗ್ ನಾಯ್ಕ ಎಂಬಾತ ಕೂಡ ಸ್ಪರ್ಧಿಸಿದ್ದ. ಇಬ್ಬರೂ ಚುನಾವಣೆಯಲ್ಲಿ ಪರಾಭವಗೊಂಡು ಬೇರೊಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದ.
ಓದಿ : ಪ್ರೀತಿ ವಿಚಾರವಾಗಿ ಬಿತ್ತು ಯುವಕನ ಹೆಣ; ಯುವತಿ ಸಂಬಂಧಿಕರ ಮೇಲೆ ಕೊಲೆ ಆರೋಪ
ಕೇಮು ನಾಯಕ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದರಿಂದ ನನಗೆ ಸೋಲಾಯಿತು ಎಂದು ನರಸಿಂಗ್ ನಾಯ್ಕ ಶನಿವಾರ ಸಂಜೆ ಗೋಗಿ ತಾಂಡಾದ ಹೋಟೆಲ್ ಬಳಿಯಲ್ಲಿದ್ದ ಕೇಮು ನಾಯಕನೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆಯಲ್ಲಿ ಕೇಮು ನಾಯಕ ಗಂಭೀರವಾಗಿ ಗಾಯಗೊಂಡು, ರಕ್ತ ಸ್ರಾವವಾಗಿ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ಶಹಾಪುರ ಗ್ರಾಮೀಣ ಠಾಣೆಯ ಸಿಪಿಐ ಶ್ರೀನಿವಾಸ ಅಲ್ಲಾಪುರ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.