ಯಾದಗಿರಿ: ಅಧಿಕಾರಿಗಳ ಒತ್ತಡಕ್ಕೆ ಮಣಿದು ಟ್ರೈನಿ ಸಾರಿಗೆ ನೌಕರ ಕೆಲಸಕ್ಕೆ ಹಾಜರಾಗುವ ಮೂಲಕ ಯಾದಗಿರಿ ಕೇಂದ್ರ ಬಸ್ ನಿಲ್ದಾಣದಿಂದ ಪೊಲೀಸ್ ಭದ್ರತೆಯೊಂದಿಗೆ ಬಸ್ ಸಂಚಾರ ಆರಂಭಗೊಂಡಿದೆ.
ಜಿಲ್ಲೆಯ ಗುರಮಿಠಕಲ್ ಘಟಕದ ಟ್ರೈನಿ ನೌಕರ ಮಾನಪ್ಪ ಎಂಬಾತ ಇಂದು ಕೆಲಸಕ್ಕೆ ಹಾಜರಾಗಿ ಯಾದಗಿರಿ ಕೇಂದ್ರ ಬಸ್ ನಿಲ್ದಾಣದಿಂದ ಗುರಮಿಠಕಲ್ ಪಟ್ಟಣಕ್ಕೆ ಒಂದೆ ಒಂದು ಬಸ್ ಸಂಚಾರ ಪ್ರಾರಂಭಗೊಂಡಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯ ಸಿಬ್ಬಂದಿ ಮುಷ್ಕರ ಮುಂದುವೆರಸಿದ್ದಾರೆ. ಆದರೆ, ಟ್ರೈನಿ ನೌಕರನಾಗಿರುವ ಮಾನಪ್ಪನನ್ನ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳು ಒತ್ತಡ ಹೇರಿದ್ದು ಒಂದು ವೇಳೆ ಕೆಲಸಕ್ಕೆ ಬಾರದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಡ್ರೈವರ್ ಕಮ್ ಕಂಡಕ್ಟರ್ ಆಗಿ ಮಾನಪ್ಪ ಕೆಲಸಕ್ಕೆ ಹಾಜರಾಗಿದ್ದಾರೆ. ಸಂಬಳದಲ್ಲಿ ಮನೆ ನಿರ್ವಹಣೆ ನಡೆಸುವುದು ಕಷ್ಟವಾಗಿದೆ, ಈಗಾಗಲೇ ಮೈತುಂಬ ಸಾಲ ಆಗಿದೆ. ಇದ್ದ ಕೆಲಸ ಹೊದರೆ ಬದುಕು ಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲಸಕ್ಕೆ ಹಾಜರಾಗಿದ್ದೇನೆ ಎಂದು ಮಾನಪ್ಪ ಅಳಲು ತೋಡಿಕೊಂಡಿದ್ದಾನೆ. ಸಾರಿಗೆ ಬಸ್ಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಎಸ್ಕಾರ್ಟ್ ಜೊತೆ ಬಸ್ ಸಂಚಾರ ಆರಂಭಿಸಲಾಗಿದೆ.