ಯಾದಗಿರಿ: ವಾಮಮಾರ್ಗದ ಮೂಲಕ ಮೈತ್ರಿ ಸರ್ಕಾರದ ಶಾಸಕರಿಂದ ರಾಜೀನಾಮೆ ಕೊಡಿಸಿದ ಬಿಜೆಪಿ ಇದೀಗ ಸರ್ಕಾರ ರಚನೆಗೆ ಮುಂದಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆಯ ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಅವರು, ದೋಸ್ತಿ ಸರ್ಕಾರದ ಶಾಸಕರಿಗೆ ಹಣದ, ಅಧಿಕಾರದ ಆಮಿಷವೊಡ್ಡಿದ ಬಿಜೆಪಿ ಮೈತ್ರಿ ಸರಕಾರದ ಪತನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಪ್ರತಿ ಶಾಸಕರಿಗೆ 50 ಕೋಟಿ ರೂ. ಹಣ ನೀಡಿ, ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಮುಂಬೈವರೆಗೆ ಕರೆದೊಯ್ದು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ ಎಂದು ಗುಡುಗಿದರು.
ರಾಜ್ಯದಲ್ಲಿ ಯಾವ ಪಕ್ಷಕ್ಕೂ ಜನರು ಸ್ಪಷ್ಟ ಬಹುಮತ ನೀಡಿಲ್ಲ. ಹಾಗಾಗಿ ಯಾವುದೇ ಎರಡು ಪಕ್ಷಗಳು ಕೂಡಿಕೊಂಡು ಸರಕಾರ ರಚನೆ ಮಾಡಬೇಕಾದ ಪರಿಸ್ಥಿತಿಯಿದೆ. ಹೀಗಿರುವಾಗ ಬಿಜೆಪಿ ಸರ್ಕಾರ ರಚನೆ ಮಾಡಲು ಗರ್ವನರ್ ಅವಕಾಶ ನೀಡಬಾರದಿತ್ತು. ಸಂಪೂರ್ಣ ಬಹುಮತ ಬಿಜೆಪಿ ಪಕ್ಷಕ್ಕಿಲ್ಲ. ಹೀಗಿದ್ದೂ ಸರ್ಕಾರ ರಚನೆ ಮಾಡಲು ಗರ್ವನರ್ ಅವಕಾಶ ನೀಡಿದ್ದು ಸಂವಿಧಾನವನ್ನ ಗಾಳಿಗೆ ತೂರಿದಂತಾಗಿದೆ ಎಂದು ಗರ್ವನರ್ ನಡೆಯನ್ನು ಟೀಕಿಸಿದರು.
ಅಲ್ಲದೇ ಜೈಲಿಗೆ ಹೋಗಿ ಬಂದ ಯಡಿಯೂರಪ್ಪರನ್ನ ಸಿಎಂ ಮಾಡಿದ್ದು ಕರ್ನಾಟಕದಲ್ಲಿ ಅಂಧ ಕಾನೂನು ಜಾರಿಯಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.