ಯಾದಗಿರಿ : ಮಾದಕ ವಸ್ತುಗಳ ವ್ಯಸನವು ಇಂತಹ ವರ್ಗ ಅಥವಾ ವೃತ್ತಿಯವರಿಗೆ ಬರಬೇಕು ಎಂದೇನು ಇಲ್ಲ. ಯಾರು ನಶೆಯ ಹಿಂದೆ ಬೀಳುತ್ತಾರೋ ಅವರು ಅದಕ್ಕೆ ಬಲಿಯಾಗುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಶಾಸಕ ರಾಜೂಗೌಡ ಹೇಳಿದರು.
ಸುರಪುರ ಬಿಜೆಪಿ ಶಾಸಕ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ ಅವರು ಹೇಳಿಕೆ ನೀಡಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್ಪಿಗಳ ಜೊತೆ ಸಿಎಂ ಮತ್ತು ಗೃಹ ಸಚಿವರು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಡ್ರಗ್ಸ್ ಜಾಲದ ಪತ್ತೆ ಚುರುಕುಗೊಂಡಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಹೇಳಿದರು.
ಯಾರು ಪೇಜ್-3 ಪಾರ್ಟಿ ಮಾಡತ್ತಾರೋ ಅಂತಾ ಪಾರ್ಟಿಯಿಂದ ನಟ, ನಟಿಯರು ಡ್ರಗ್ಸ್ ವ್ಯಸಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಜಮೀರ್ ಅಹ್ಮದ್ ಮತ್ತು ಸಂಜನಾ ಕ್ಯಾಸಿನೋಗೆ ತೆರಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ರಾಜುಗೌಡ ಅವರು, ಈಚೆಗೆ ಡ್ಯಾಮೇಜಿಂಗ್ ಹೇಳಿಕೆಗಳು ಹೆಚ್ಚಾಗಿವೆ. ಸತ್ಯ ಯಾವುದೋ, ಸುಳ್ಳು ಯಾವುದೋ ಗೊತ್ತಾಗುತ್ತಿಲ್ಲ.
ಪ್ರಶಾಂತ ಸಂಬರಗಿ ಎನ್ನುವರು ಈ ಆರೋಪ ಮಾಡಿದ್ದಾರೆ. ಅವರು ಒಬ್ಬ ಶಾಸಕರ ಮೇಲೆ ಗಂಭೀರ ಆರೋಪ ಮಾಡುವಾಗ ಸಂಬಂಧಿಸಿದ ದಾಖಲೆ ಇದ್ದರೆ ಕೇಸ್ ದಾಖಲಿಸಲಿ. ಜಮೀರ್ ಕ್ಯಾಸಿನೋಗೆ ಹೋದಾಗ ಸಂಜನಾ ಇದ್ದರೋ ಇಲ್ಲವೋ ಅಂತಾ ತನಿಖೆಯಿಂದ ಹೊರ ಬರುತ್ತದೆ. ಸತ್ಯ ಹೊರ ಬಂದಾಗ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಉತ್ತರಿಸಿದರು.