ಯಾದಗಿರಿ : ಮಾಸ್ಕ್ ಧರಿಸದೇ ಓಡಾಡುತ್ತಿದ್ದ ವಾಹನ ಸವಾರರಿಗೆ ಮತ್ತು ವ್ಯಾಪಾರಸ್ಥರಿಗೆ ಸ್ಥಳೀಯ ಅಧಿಕಾರಿಗಳು ವಿವಿಧ ತಂತ್ರಗಳ ಮೂಲಕ ಬಿಸಿ ಮುಟ್ಟಿಸಿ, ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು. ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕಿ ಶರಣಮ್ಮ ಅವರ ನೇತೃತ್ವದ ತಂಡದಿಂದ ಮಾಸ್ಕ್ ಧರಿಸದ ಜನರಿಗೆ ಸಿಟಿಯಲ್ಲಿ ದಂಡ ಹಾಕುವ ಕಾಯಕ ನಡೆದಿದ್ದು ಹಲವೆಡೆ ಇಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುಂಡರಿಗೆ ಸಖತ್ ಫುಲ್ ಕ್ಲಾಸ್ ನೀಡಿದರು.
ಮಾಸ್ಕ್ ಧರಿಸುವಂತೆ ತಿಳಿ ಹೇಳಿದ ಅಧಿಕಾರಿಗಳ ಮಾತಿಗೆ ಉದ್ಧಟತನ ತೋರಿದ ಯುವಕನೋರ್ವನಿಗೆ ಈ ವೇಳೆ ಸಖತ್ ಕ್ಲಾಸ್ ತೆಗೆದುಕೊಂಡರು. ಇದೇ ವೇಳೆ ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದ ಬೇಕರಿ ಮಾಲೀಕರೊಬ್ಬರಿಗೆ ಸಹ ಎಚ್ಚರಿಕೆ ನೀಡಲಾಯಿತು. ಬೇಕರಿ ಮಾಲೀಕ ಅಧಿಕಾರಿಗಳ ಮಾತು ಕೇಳದ ಹಿನ್ನೆಲೆಯಲ್ಲಿ ಸಿಬ್ಬಂದಿಯು ಬೇಕರಿ ಉತ್ಪನ್ನಗಳನ್ನೇ ಎತ್ತಿಕೊಂಡು ಹೋದ ಪ್ರಸಂಗ ನಡೆಯಿತು.
ಮತ್ತೊಂಡೆದೆ ಮಾಸ್ಕ್ ಧರಿಸದ ವಾಹನ ಸವಾರರಿಗೆ ಪೊಲೀಸರು ಶಾಕ್ ನೀಡಿದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ನಿಯಂತ್ರಿಸಲು ಮಾಸ್ಕ್ ಧರಿಸದೇ ನಗರದಲ್ಲಿ ಸಂಚಾರ ಮಾಡುತ್ತಿದ್ದ ಸವಾರರ ಬೈಕ್ ಪ್ಲಗ್ ಕಿತ್ತುಕೊಳ್ಳುವ ಮೂಲಕ ಪೊಲೀಸರು ಪಾಠ ಕಲಿಸಿದರೆ, ನಗರಸಭೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಮಾಸ್ಕ್ ಧರಿಸುವಂತೆ ತಮ್ಮದೇ ಆದ ಸ್ಟೈಲ್ನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.