ಯಾದಗಿರಿ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ನಗರದ ಸುಭಾಷ್ ವೃತ್ತದ ಬಳಿ ನಡೆದಿದೆ. ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುಭಾಷ್ ವೃತ್ತದ ಖಾಸಗಿ ಕಂಪ್ಯೂಟರ್ ಸೆಂಟರ್ಗೆ ನುಗ್ಗಿ ಮುದ್ನಾಳ್ ತಾಂಡಾ ನಿವಾಸಿ ಆನಂದ ಹಾಗೂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಪ್ರಿಯಾಂಕಾ ಹಾಗೂ ಆಕೆಯ ಅಜ್ಜಿ ಬೇಬಿಬಾಯಿ ಹಲ್ಲೆಗೊಳಗಾದವರು. ಮದುವೆಗೂ ಮುಂಚೆ ಆನಂದ ಹಾಗೂ ಪ್ರಿಯಾಂಕಾ ಮಧ್ಯೆ ಪ್ರೀತಿ ಇತ್ತಂತೆ. ಆಗ ಆನಂದ ಪ್ರಿಯಾಂಕಾಗೆ ಹಣ ನೀಡಿದ್ನಂತೆ. ಇದೇ ವಿಚಾರಕ್ಕೆ ಆನಂದ ಹಾಗೂ ಪ್ರಿಯಾಂಕಾ ಕುಟುಂಬಸ್ಥರ ಮಧ್ಯೆ ಈ ಹಿಂದೆ ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ.
ಮಂಗಳವಾರ ಪ್ರಿಯಾಂಕಾ ತನ್ನ ಕುಟಂಬದವರೊಂದಿಗೆ ಯಾದಗಿರಿಗೆ ಆಗಮಿಸಿದ್ದನ್ನ ಗಮನಿಸಿ ಆನಂದ್ ಮತ್ತು ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.