ಯಾದಗಿರಿ:ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಗರ್ಭಿಣಿಯರು ಹಾಗೂ ಅಂಗನವಾಡಿ ಮಕ್ಕಳಿಗೆ ಸಿಗಬೇಕಾದ ಪೌಷ್ಠಿಕ ಆಹಾರ ಭೀಮಾನದಿ ಪಾಲಾದ ಘಟನೆ ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕಂದಳ್ಳಿ ಗ್ರಾಮದಲ್ಲಿ ನಡೆದಿದೆ.
ಕಂದಳ್ಳಿ ಗ್ರಾಮದ ಅಂಗನವಾಡಿಗೆ ಸರಬರಾಜಾದ ಪೌಷ್ಠಿಕ ಆಹಾರವನ್ನು ಅಂಗನವಾಡಿ ಶಿಕ್ಷಕಿ ಫಲಾನುಭವಿಗಳಿಗೆ ವಿತರಿಸದೆ ನಿಷ್ಕಾಳಜಿ ತೋರಿದ ಪರಿಣಾಮ ಆಹಾರ ಪದಾರ್ಥ ಅವಧಿ ಮುಗಿದು ಹಾಳಾಗಿದೆ. ಕೆಟ್ಟ ಬೆಲ್ಲ, ಶೇಂಗಾ, ಎಣ್ಣೆ ಪ್ಯಾಕೇಟ್ಗಳು, ಗೋಧಿ, ಹೆಸರು ಕಾಳು, ಕಡ್ಲೆ, ಹಾಲಿನ ಪೌಡರ್‌ನ ಪ್ಯಾಕೇಟ್‌ಗಳನ್ನು ಭೀಮಾ ನದಿಯ ನೀರಿನಲ್ಲಿ ಹಾಕಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಂಗನವಾಡಿಯಲ್ಲಿ ದಿನಸಿಗಳೆಲ್ಲಾ ಹುಳ ಹತ್ತಿ ಸಂಪೂರ್ಣ ಹಾಳಾಗಿ ಹೋಗಿವೆ. ಇನ್ನು ಮೇಲ್ವಿಚಾರಕಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 3 ತಿಂಗಳಿನಿಂದ ಈ ಅಂಗನವಾಡಿ ಶಿಕ್ಷಕಿ ಕರ್ತವ್ಯಕ್ಕೂ ಸರಿಯಾಗಿ ಹಾಜರಾಗಿಲ್ವಂತೆ. ಸೇವೆಗೆ ಚಕ್ಕರ್ ಹೊಡೆದಿದ್ದಲ್ಲದೆ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ವಿತರಣೆಯಲ್ಲಿಯೂ ನಿಷ್ಕಾಳಜಿ ತೋರಿದ ಅಂಗನವಾಡಿ ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.