ಸುರಪುರ: ಕೊರೊನಾ ಸೊಂಕು ನಿರ್ಮೂಲನೆಗೊಳಿಸಲು ಸರ್ಕಾರ ಇಡೀ ದೇಶಾದ್ಯಂತ ಲಾಕ್‌ಡೌನ್ ಮೂಲಕ ಬಂದ್‌ಗೆ ಕರೆ ನೀಡಿದ್ದರಿಂದ ಸುರಪುರ ನಗರಕ್ಕೂ ಲಾಕ್‌ಡೌನ್ ಬಿಸಿ ತಟ್ಟಿದೆ. ನಿನ್ನೆಯವರೆಗೂ ತೆಗೆದಿದ್ದ ಎಲ್ಲಾ ಮಸೀದಿಗಳು ಇಂದಿನಿಂದ 31ನೇ ತಾರೀಖಿನ ವರೆಗೆ ಲಾಕ್‌ಡೌನ್ ಕಾರಣದಿಂದ ಮುಚ್ಚಲಾಗಿದೆ ಎಂದು ಮಸೀದಿಗಳ ಮುಖ್ಯದ್ವಾರಕ್ಕೆ ಬೋರ್ಡ್ ಹಾಕಲಾಗಿದೆ.
ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿನ ವೀರತಪಸ್ವಿ ಚೆನ್ನವೀರ ಶಿವಾಚಾರ್ಯ ಸ್ವಾಮಿ ಮಠದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಆದರೆ ಲಾಕ್‌ಡೌನ್ ಲೆಕ್ಕಿಸದ ಶಹಾಪುರ ತಾಲೂಕಿನ ಕಕ್ಕಸಗೇರಾ ಗ್ರಾಮದ ಹನುಮಂತ ದೇವರ ಜಾತ್ರಾ ನಿಮಿತ್ತ ಅಲ್ಲಿಯ ನೂರಾರು ಸಂಖ್ಯೆಯ ಭಕ್ತರು ಕೃಷ್ಣಾ ನದಿಗೆ ಹೋಗಿ ಸ್ನಾನ ಮಾಡಿ ದೇವರ ಮೆರವಣಿಗೆಯನ್ನು ನಗರದಲ್ಲಿ ಮಾಡುತ್ತ ಹೋಗಿದ್ದು ಲಾಕ್‌ಡೌನ್‌ಗೆ ಡೋಂಟ್ ಕೇರ್ ಎನ್ನುವಂತಿತ್ತು.
ಇನ್ನು ಲಾಕ್‌ಡೌನ್ ಎಫೆಕ್ಟ್ ನಗರಕ್ಕೆ ಜೋರಾಗಿ ತಟ್ಟಿದ್ದು, ಜನರು ಕೊರೊನಾ ನಿರ್ಮೂಲನೆಗಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಾ ಬಂದ್‌ಗೆ ಸ್ಪಂದಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ.