ಯಾದಗಿರಿ: ಬರೋಬ್ಬರಿ 20 ಟನ್ ಪಡಿತರ ಅಕ್ಕಿಯನ್ನು ತುಂಬಿದ್ದ ಲಾರಿಯನ್ನೇ ಖದೀಮರು ಎಗರಿಸಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ವಿವಿಧ ಗ್ರಾಮಗಳ ಪಡಿತರ ಕೇಂದ್ರಗಳಿಗೆ ವಿತರಿಸಲು ಎಂದು ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದ ಲಾರಿಯನ್ನು ಅಕ್ಕಿ ಸಮೇತ ಕಳವು ಮಾಡಲಾಗಿದೆ.
ನಗರದ ಎಪಿಎಂಸಿಯಲ್ಲಿ ಅನ್ನ ಭಾಗ್ಯ ಅಕ್ಕಿಯನ್ನು ಸರಬರಾಜು ಮಾಡುವ ನಾಲ್ಕು ಲಾರಿಯನ್ನು ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಲಾರಿಯಲ್ಲಿ 20 ಟನ್(420 ಮೂಟೆ) ಅಕ್ಕಿ ಇತ್ತು. ಲಾರಿಯ ಚಾಲಕ ಕೀಲಿಯನ್ನು ಬಿಟ್ಟು ಬೇರೆ ಕಡೆ ತೆರಳಿದ್ದ, ಆಗ ಇದೇ ಸಮಯ ಸಾಧಿಸಿದ ಖದೀಮರು ಲಾರಿ ಸಮೇತ ಅಕ್ಕಿಯನ್ನು ಕಳವು ಮಾಡಿದ್ದಾರೆ ಎಂದು ಶಹಾಪುರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ವಿಚಾರಣೆ ನಡೆದಿದ್ದು, ಲಾರಿ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶಹಾಪುರ ಠಾಣೆಯ ಪಿಎಸ್‌ಐ ಚೆನ್ನಯ್ಯ ಹಿರೇಮಠ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಬಡವರ ಪಾಲಿನ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಇಷ್ಟಾದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಕಾರಣಕ್ಕೆ ಇಂದು ಲಾರಿ ಸಮೇತ ಪಡಿತರ ಅಕ್ಕಿಯನ್ನು ಕಳ್ಳತನ ಮಾಡಲಾಗಿದೆ. ವ್ಯಾಪಕವಾಗಿ ಈ ಅಕ್ರಮ ಜಾಲಕ್ಕೆ ಹಿಂಬಾಗಿಲಿನಿಂದ ಅಧಿಕಾರಿಗಳೇ ಈ ಕೃತ್ಯದಲ್ಲಿ ತೊಡಗಿದ್ದಾರ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಬಡವರಿಗೆ ಸಲ್ಲ ಬೇಕಾಗಿರುವ ಪಡಿತರ ಅಕ್ಕಿಯು ಅಕ್ರಮವಾಗಿ ಮಾರಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಲಾರಿ ಜಪ್ತಿ: ಇತ್ತೀಚಿಗೆ ರಾಯಚೂರು ಜಿಲ್ಲೆಯಲ್ಲಿ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಮುದಗಲ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಅಂಕಲಿಮಠ ಕ್ರಾಸ್ ಬಳಿ ಜಪ್ತಿ ಮಾಡಲಾಗಿತ್ತು. ಲಾರಿಯಲ್ಲಿ 605 ಅಕ್ಕಿ ಚೀಲದಲ್ಲಿ ಸರಿಸುಮಾರು 296 ಕ್ವಿಂಟಾಲ್ನ, 6 ಲಕ್ಷ ಮೌಲ್ಯದ ಅಕ್ಕಿ ಜಪ್ತಿ ಮಾಡಲಾಗಿತ್ತು. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೆರೆಗೆ ಪಿಎಸ್‌ಐ ಪ್ರಕಾಶ್ ಡಂಬಳ ನೇತೃತ್ವದಲ್ಲಿ ತಂಡ ದಾಳಿ ನಡೆಸಲಾಗಿತ್ತು. ದಾಳಿಯ ವೇಳೆ ಲಾರಿಯಲ್ಲಿದ್ದ ಚಾಲಕ ನಾಗೇಶ್, ವಿರುಪನಗೌಡ, ಮಣಿಕಂಠ ಎನ್ನುವವರನ್ನು ಬಂಧಿಸಲಾಗಿದ್ದು, ಅಕ್ಕಿ ಸಮೇತ ಲಾರಿಯನ್ನು ವಶಕ್ಕೆ ಪಡೆಯಲಾಗಿತ್ತು.
ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ವಶ : ಇನ್ನು ಹುಬ್ಬಳ್ಳಿಯಲ್ಲಿ ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದರು. ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿದ್ದ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದ ತಂಡದ ಐವರನ್ನು ಬಂಧಿಸಿ, 450 ಚೀಲ ಅಕ್ಕಿ, 5 ಲಕ್ಷ ರೂ. ನಗದು ಹಾಗೂ ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ:1.15 ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಕಳತ್ತೂರು ವಿಶ್ವನಾಥ್ ಶೆಟ್ಟಿ ಬಂಧನ